November 15, 2026
Sunday, November 15, 2026
spot_img

ಸ್ಪೇಸ್‌ಎಕ್ಸ್ ಐತಿಹಾಸಿಕ ಸಾಧನೆ: ‘ಚಾಪ್‌ಸ್ಟಿಕ್ಸ್’ ಮೂಲಕ ಸ್ಟಾರ್‌ಶಿಪ್ ರಾಕೆಟ್ ಯಶಸ್ವಿ ಕ್ಯಾಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಸಂಸ್ಥೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಭೂಮಿಯ ಕಕ್ಷೆಗೆ ತೆರಳಿದ್ದ ದೈತ್ಯ ‘ಸ್ಟಾರ್‌ಶಿಪ್’ ಬಾಹ್ಯಾಕಾಶ ನೌಕೆಯ ಮೇಲ್ಭಾಗವು ಭಾನುವಾರ ಟೆಕ್ಸಾಸ್‌ನ ಉಡಾವಣಾ ಕೇಂದ್ರಕ್ಕೆ ಯಶಸ್ವಿಯಾಗಿ ಮರಳಿದ್ದು, ಲಾಂಚ್ ಟವರ್‌ನ ದೈತ್ಯ ಯಾಂತ್ರಿಕ ತೋಳುಗಳು ಅದನ್ನು ಗಾಳಿಯಲ್ಲೇ ಸುರಕ್ಷಿತವಾಗಿ ಹಿಡಿದಿವೆ. ಕಕ್ಷೆಗೆ ತೆರಳಿ ಮರಳಿದ ಸ್ಟಾರ್‌ಶಿಪ್ ನೌಕೆಯನ್ನು ಉಡಾವಣಾ ಕೇಂದ್ರದಲ್ಲೇ ಈ ರೀತಿ ಮರಳಿ ಪಡೆದಿರುವುದು ಇತಿಹಾಸದಲ್ಲೇ ಇದೇ ಮೊದಲು.

22 ಗಂಟೆಗಳ ಬಾಹ್ಯಾಕಾಶ ಪಯಣ

ಸ್ಟಾರ್‌ಶಿಪ್‌ನ 15ನೇ ಪರೀಕ್ಷಾರ್ಥ ಹಾರಾಟವಾದ ‘ಫ್ಲೈಟ್ 15’ ಭಾಗವಾಗಿ ನವೆಂಬರ್ 14ರಂದು ದಕ್ಷಿಣ ಟೆಕ್ಸಾಸ್‌ನ ಸ್ಟಾರ್‌ಬೇಸ್‌ನಿಂದ ‘ಶಿಪ್ 42’ ನೌಕೆ ನಭಕ್ಕೆ ಚಿಮ್ಮಿತ್ತು. ಭೂಮಿಯಿಂದ ಸುಮಾರು 275 ಕಿ.ಮೀ ಎತ್ತರದ ಕೆಳ ಕಕ್ಷೆಯನ್ನು ತಲುಪಿದ ಈ ನೌಕೆಯು, ಬಾಹ್ಯಾಕಾಶದಲ್ಲಿ 22 ಗಂಟೆಗಳಿಗೂ ಹೆಚ್ಚು ಕಾಲ ಕಳೆದು ಭೂಮಿಗೆ 14 ಸುತ್ತುಗಳನ್ನು ಹಾಕಿತು. ಈ ಅವಧಿಯಲ್ಲಿ ಮುಂದಿನ ಪೀಳಿಗೆಯ 26 ‘ಸ್ಟಾರ್‌ಲಿಂಕ್ ವಿ3’ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು. ಇದರಲ್ಲಿನ ಮೂರು ಉಪಗ್ರಹಗಳಲ್ಲಿದ್ದ ಕ್ಯಾಮೆರಾಗಳು ನೌಕೆಯ ಉಷ್ಣ ಕವಚ ಮತ್ತು ಇತರ ಬಿಡಿಭಾಗಗಳನ್ನು ಪರಿಶೀಲಿಸಿ, ಭೂಮಿಗೆ ಮರಳಲು ನೌಕೆ ಸಜ್ಜಾಗಿದೆ ಎಂಬುದನ್ನು ಖಚಿತಪಡಿಸಿದವು.

ಗಾಳಿಯಲ್ಲೇ ಕ್ಯಾಚ್ ಹಿಡಿದ ‘ಮೆಕಾಜಿಲ್ಲಾ’

ಅಂತಿಮ ತಪಾಸಣೆಯ ನಂತರ ಭೂಮಿಯ ವಾತಾವರಣವನ್ನು ಪ್ರವೇಶಿಸಿದ ನೌಕೆಯು, ನಿಯಂತ್ರಿತ ರೀತಿಯಲ್ಲಿ ಕೆಳಗಿಳಿದು ಸ್ಟಾರ್‌ಬೇಸ್ ಲಾಂಚ್ ಟವರ್‌ಗೆ ನೇರವಾಗಿ ಬಂದು ನಿಂತಿತು. ಭಾರತೀಯ ಕಾಲಮಾನ ಭಾನುವಾರ ಬೆಳಗಿನ ಜಾವ 2:52ರ ಸುಮಾರಿಗೆ ‘ಮೆಕಾಜಿಲ್ಲಾ’ ಟವರ್‌ನ ‘ಚಾಪ್‌ಸ್ಟಿಕ್ಸ್’ ಎಂದು ಕರೆಯಲ್ಪಡುವ ಎರಡು ದೈತ್ಯ ಯಾಂತ್ರಿಕ ತೋಳುಗಳು ನೌಕೆಯನ್ನು ಯಶಸ್ವಿಯಾಗಿ ಹಿಡಿದು ಲಾಂಚ್ ಪ್ಯಾಡ್ ಮೇಲೆ ನಿಲ್ಲಿಸಿದವು. ಈ ಕುರಿತು ಎಕ್ಸ್ ನಲ್ಲಿ ಹರ್ಷ ವ್ಯಕ್ತಪಡಿಸಿರುವ ಸ್ಪೇಸ್‌ಎಕ್ಸ್, “ಮೆಕಾಜಿಲ್ಲಾ ಸ್ಟಾರ್‌ಶಿಪ್ ಅನ್ನು ಹಿಡಿದಿದೆ! ಈ ಅದ್ಭುತ ಸಾಧನೆಗಾಗಿ ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ತಿಳಿಸಿದೆ.

ಮರುಬಳಕೆ ರಾಕೆಟ್ ತಂತ್ರಜ್ಞಾನಕ್ಕೆ ದೊಡ್ಡ ಬಲ

ಸ್ಪೇಸ್‌ಎಕ್ಸ್ ಈ ಹಿಂದೆ ‘ಸೂಪರ್ ಹೆವಿ ಬೂಸ್ಟರ್’ಗಳನ್ನು ಯಶಸ್ವಿಯಾಗಿ ಮರಳಿ ಪಡೆದಿತ್ತಾದರೂ, ಕಕ್ಷೆಯಿಂದ ಮರಳಿದ ಸ್ಟಾರ್‌ಶಿಪ್ ಮೇಲ್ಭಾಗವನ್ನು ಟವರ್ ಮೂಲಕ ಹಿಡಿದಿರಲಿಲ್ಲ. ಈ ಬಾರಿಯ ಕಾರ್ಯಾಚರಣೆಯಲ್ಲಿ ಎರಡೂ ಭಾಗಗಳನ್ನು ಟವರ್ ಮೂಲಕವೇ ಮರಳಿ ಪಡೆಯುವ ಗುರಿ ಹೊಂದಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಸೂಪರ್ ಹೆವಿ ಬೂಸ್ಟರ್ ಅನ್ನು ಟವರ್‌ನಲ್ಲಿ ಹಿಡಿಯುವ ಯೋಜನೆಯನ್ನು ಕೈಬಿಟ್ಟು, ಮೆಕ್ಸಿಕೋ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಎರಡೂ ಭಾಗಗಳನ್ನು ಮರುಬಳಕೆ ಮಾಡುವ ಈ ತಂತ್ರಜ್ಞಾನವು ಭವಿಷ್ಯದಲ್ಲಿ ಬಾಹ್ಯಾಕಾಶ ಉಡಾವಣಾ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಲಿದ್ದು, ಚಂದ್ರ ಮತ್ತು ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಸ್ಪೇಸ್‌ಎಕ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ದೊಡ್ಡ ಬಲ ನೀಡಲಿದೆ.

Must Read

Skip to toolbar