November 15, 2026
Sunday, November 15, 2026
spot_img

ನನ್ನೆಲ್ಲಾ ಗೊಂದಲಗಳಿಗೆ ವಿಕ್ಕಿಯೇ ಪರಿಹಾರ: ಪತಿ ಬೆಂಬಲದ ಬಗ್ಗೆ ನಟಿ ಕತ್ರಿನಾ ಭಾವುಕ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಸದ್ಯ ತಮ್ಮ ವೈವಾಹಿಕ ಜೀವನ ಮತ್ತು ತಾಯ್ತನದ ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಆದರೆ, ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾಗದ ಅವರು, ತಮ್ಮ ‘ಕೇ ಬ್ಯೂಟಿ’ ಸೌಂದರ್ಯವರ್ಧಕ ಉದ್ಯಮದಲ್ಲೂ ಅಷ್ಟೇ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕತ್ರಿನಾ, ತಮ್ಮ ವೃತ್ತಿ, ತಾಯ್ತನ ಮತ್ತು ಪತಿ ವಿಕ್ಕಿ ಕೌಶಲ್ ಅವರ ಬೆಂಬಲದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

2019ರಲ್ಲಿ ಭಾರತದಲ್ಲಿ ಆರಂಭವಾದ ಕತ್ರಿನಾ ಅವರ ‘ಕೇ ಬ್ಯೂಟಿ’ ಬ್ರ್ಯಾಂಡ್ ಇಂದು ಯುಎಇ ಮತ್ತು ಇಂಗ್ಲೆಂಡ್‌ಗೂ ವಿಸ್ತರಿಸಿದೆ. ನೈಕಾ ಸಂಸ್ಥೆಯ ಅದ್ವೈತಾ ನಾಯರ್ ಅವರೊಂದಿಗೆ ಉದ್ಯಮದ ಕುರಿತು ಮಾತನಾಡಿದ ಕತ್ರಿನಾ, “ನಮಗೆ ಒಂದು ಕೆಲಸದ ಮೇಲೆ ನಿಜವಾದ ಪ್ರೀತಿ ಮತ್ತು ಆಸಕ್ತಿ ಇದ್ದಾಗ, ನಾವು ಎಷ್ಟು ಗಂಟೆ ಕೆಲಸ ಮಾಡುತ್ತಿದ್ದೇವೆ ಎಂದು ಗಡಿಯಾರ ನೋಡುವುದಿಲ್ಲ. ನಾನು ಮತ್ತು ಅದ್ವೈತಾ ಇಬ್ಬರೂ ತಾಯಂದಿರಾಗಿದ್ದರೂ, ಶನಿವಾರ ಮತ್ತು ಭಾನುವಾರಗಳಲ್ಲೂ ಉದ್ಯಮದ ಬಗ್ಗೆ ಚರ್ಚಿಸುತ್ತೇವೆ” ಎಂದಿದ್ದಾರೆ.

ಕತ್ರಿನಾ ಕೆಲಸದಲ್ಲಿ ಮುಳುಗಿರುವಾಗ ಅವರ ಪತಿ ವಿಕ್ಕಿ ಕೌಶಲ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅವರು ತಮಾಷೆಯಾಗಿ ಹಂಚಿಕೊಂಡಿದ್ದಾರೆ. “ನಾನು ಕೆಲಸದ ಸಮಯವನ್ನು ಲೆಕ್ಕ ಹಾಕುವುದಿಲ್ಲ. ಆದರೆ ಮನೆಯಲ್ಲಿ ಒಬ್ಬರು ನನ್ನ ಸಮಯವನ್ನು ಲೆಕ್ಕ ಹಾಕುತ್ತಿರುತ್ತಾರೆ, ಅವರೇ ನನ್ನ ಪತಿ ವಿಕ್ಕಿ. ನಾನು ಸದಾ ಫೋನ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ‘ಮೊದಲು ಫೋನ್ ಕೆಳಗಿಡು’ ಎಂದು ಪ್ರೀತಿಯಿಂದ ಗದರುತ್ತಾರೆ” ಎಂದು ಕತ್ರಿನಾ ನಗುತ್ತಾ ಹೇಳಿದ್ದಾರೆ.

ಒಬ್ಬ ನಟಿಯಾಗಿ, ಉದ್ಯಮಿಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಎಲ್ಲಾ ಜವಾಬ್ದಾರಿಗಳನ್ನು ಒಟ್ಟಿಗೆ ನಿಭಾಯಿಸುವುದು ಸುಲಭವಲ್ಲ. ಈ ಬಗ್ಗೆ ಮಾತನಾಡಿದ ಕತ್ರಿನಾ, “ದಿನದ ಕೊನೆಯಲ್ಲಿ ವಿಪರೀತ ಒತ್ತಡ ಮತ್ತು ಆಯಾಸವಾಗುವುದು ಸಹಜ. ಎಲ್ಲವನ್ನೂ ಒಂದೇ ಬಾರಿಗೆ ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿದ್ದಾಗ ನಮ್ಮ ಮೇಲೆ ನಾವೇ ಹೆಚ್ಚು ಒತ್ತಡ ಹೇರಿಕೊಳ್ಳಬಾರದು. ನನ್ನೆಲ್ಲಾ ಆತಂಕ ಮತ್ತು ತಲ್ಲಣಗಳಿಗೆ ನನ್ನ ಪತಿ ವಿಕ್ಕಿ ಕೌಶಲ್ ಶಾಂತಿಯ ತಂಗಾಳಿಯಂತೆ ಇದ್ದಾರೆ. ಅವರ ಅಪಾರ ಬೆಂಬಲದಿಂದಲೇ ಈ ಪಯಣ ಇಷ್ಟು ಸುಂದರವಾಗಿದೆ” ಎಂದು ಭಾವುಕರಾಗಿ ನುಡಿದಿದ್ದಾರೆ.

Must Read

Skip to toolbar