November 15, 2026
Sunday, November 15, 2026
spot_img

ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್: 33 ಸಾವಿರಕ್ಕೂ ಹೆಚ್ಚು ಜನರ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಹುನಿರೀಕ್ಷಿತ ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಕಾಳೇನ ಅಗ್ರಹಾರ ಮತ್ತು ಎಸ್‌ಜಿ ಪಾಳ್ಯ ನಡುವಿನ 7.5 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ ರೈಲು ಸಂಚಾರ ಆರಂಭವಾಗಿದ್ದು, ಮೊದಲ ದಿನವೇ 33,409 ಮಂದಿ ಪ್ರಯಾಣಿಸಿದ್ದಾರೆ. ಹೊಸ ಮೆಟ್ರೋ ಮಾರ್ಗದ ಆರಂಭ ಪ್ರಯಾಣಿಕರಲ್ಲಿ ನಿರಾಳತೆ, ಸಂತಸ ಮತ್ತು ಸಂಭ್ರಮ ಮೂಡಿಸಿತು.

ಟಿಕೆಟ್ ಜೊತೆಗೆ ಗುಲಾಬಿ ಬಣ್ಣದ ಗುಲಾಬಿ

ಪಿಂಕ್ ಲೈನ್‌ಗೆ ಸ್ವಾಗತ ಕೋರುವ ಉದ್ದೇಶದಿಂದ ಬಿಎಂಆರ್‌ಸಿಎಲ್ ವಿಶೇಷ ವ್ಯವಸ್ಥೆ ಮಾಡಿತ್ತು. ಟಿಕೆಟ್ ಖರೀದಿಸಿದ ಪ್ರಯಾಣಿಕರಿಗೆ ಗುಲಾಬಿ ಬಣ್ಣದ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಹೊಸ ಮಾರ್ಗದ ಮೊದಲ ದಿನವನ್ನು ಸ್ಮರಣೀಯವಾಗಿಸಿತು. ಗುಲಾಬಿ ಬಣ್ಣದ ಉಡುಪು ಧರಿಸಿ, ಕೈಯಲ್ಲಿ ಹೂವು ಹಿಡಿದು ಸಂಚರಿಸುತ್ತಿದ್ದ ಪುಟಾಣಿಗಳ ದೃಶ್ಯ ನಿಲ್ದಾಣಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು.

33,409 ಪ್ರಯಾಣಿಕರ ಪ್ರಯಾಣ

ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಒಟ್ಟು 33,409 ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಿದ್ದಾರೆ. ಬೆಳಗಿನ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ತುಸು ಕಡಿಮೆಯಿದ್ದರೂ, ಮಧ್ಯಾಹ್ನದ ನಂತರ ಗಣನೀಯವಾಗಿ ಏರಿಕೆಯಾಗಿ ಸಂಜೆಯ ವೇಳೆಗೆ ಮತ್ತಷ್ಟು ಹೆಚ್ಚಾಯಿತು. ವಿಶೇಷವಾಗಿ ಜಯದೇವ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬಂದಿತು.

ಇದನ್ನೂ ಓದಿ:

ಕಾಳೇನ ಅಗ್ರಹಾರ ಮತ್ತು ಆರ್.ವಿ. ರಸ್ತೆಯ ಕಡೆಗೆ ಪ್ರಯಾಣಿಕರ ಒಲವು ಹೆಚ್ಚಿತ್ತು. ಬೊಮ್ಮಸಂದ್ರದ ಕಡೆಗೆ 1,065 ಹಾಗೂ ಸುದ್ದಗುಂಟೆ ಪಾಳ್ಯದ ಕಡೆಗೆ 1,596 ಮಂದಿ ಪ್ರಯಾಣಿಸಿದ್ದಾರೆ. ಇನ್ನೊಂದೆಡೆ, ಕಾಳೇನ ಅಗ್ರಹಾರದ ಕಡೆಗೆ 4,346 ಮತ್ತು ಆರ್.ವಿ. ರಸ್ತೆಯ ಕಡೆಗೆ 4,263 ಮಂದಿ ಸಂಚರಿಸಿದ್ದಾರೆ.

ಸೋಮವಾರದಿಂದ ಪ್ರಯಾಣಿಕರ ನೈಜ ಸಂಚಾರದ ಪ್ರಮಾಣದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ತಿಂಗಳ ಅಂತ್ಯದ ವೇಳೆಗೆ ಸಂಖ್ಯೆ ಸ್ಥಿರಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗಳು, ಮಾಲ್‌ಗಳು, ಕಾಲೇಜುಗಳು ಮತ್ತು ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಹೊಸ ಮಾರ್ಗವು ಬೆಂಗಳೂರಿನ ಸಂಚಾರ ದಟ್ಟಣೆಗೆ ಪರ್ಯಾಯವಾಗುವುದರ ಜೊತೆಗೆ, ಸಾವಿರಾರು ಜನರ ದೈನಂದಿನ ಪ್ರಯಾಣವನ್ನು ಸುಲಭಗೊಳಿಸುವ ನಿರೀಕ್ಷೆಯಿದೆ.

Must Read

Skip to toolbar