ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಚೀನಾ ಗಡಿ ಪ್ರದೇಶದಲ್ಲಿ ಮತ್ತೊಮ್ಮೆ ಭದ್ರತಾ ಆತಂಕ ಎದುರಾಗಿದೆ. ಸಿಕ್ಕಿಂ ವಲಯದ ಭಾರತೀಯ ವಾಯುಪ್ರದೇಶಕ್ಕೆ ಚೀನಾದ ಮಿಲಿಟರಿ ವಿಮಾನವೊಂದು ಪ್ರವೇಶಿಸಿದೆ ಎಂಬ ವರದಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ನವೆಂಬರ್ 12ರಂದು ನಡೆದಿರುವುದಾಗಿ ಹೇಳಲಾದ ಈ ಘಟನೆಯಲ್ಲಿ ಭಾರತೀಯ ವಾಯುಪಡೆ (IAF) ವಿಮಾನಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿ, ಚೀನಾದ ವಾಯುಪ್ರದೇಶಕ್ಕೆ ಮರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ನವೆಂಬರ್ 14ರಂದು ಪ್ರಕಟವಾದ ಔಟ್ಲುಕ್ ಇಂಡಿಯಾ ವರದಿಯ ಪ್ರಕಾರ, ಚೀನಾದ ವಿಮಾನ ಸುಮಾರು 20ರಿಂದ 25 ನಿಮಿಷಗಳ ಕಾಲ ಸಿಕ್ಕಿಂ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದೆ. ಬೆಳಗ್ಗೆ ಸುಮಾರು 8 ಗಂಟೆಗೆ 25 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಭಾರತೀಯ ವಾಯುಪಡೆ ಪತ್ತೆಹಚ್ಚಿತ್ತು ಎನ್ನಲಾಗಿದೆ. ರೇಡಿಯೋ ಮೂಲಕ ಹಲವು ಬಾರಿ ಎಚ್ಚರಿಕೆ ನೀಡಿದರೂ ವಿಮಾನ ತಕ್ಷಣ ಹಿಂದಿರುಗಿರಲಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ಆದರೆ ವಿಮಾನದ ನಿಖರ ಮಾದರಿ, ಅದು ಸಂಚರಿಸಿದ ಮಾರ್ಗ ಹಾಗೂ ಅದರ ಉದ್ದೇಶದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆ ಅಥವಾ ರಕ್ಷಣಾ ಸಚಿವಾಲಯದಿಂದ ಅಧಿಕೃತ ದೃಢೀಕರಣವೂ ಹೊರಬಿದ್ದಿಲ್ಲ. ಚೀನಾ ಸರ್ಕಾರದ ಪ್ರತಿಕ್ರಿಯೆಯೂ ವರದಿಯಾಗಿಲ್ಲ.
ಡೋಕ್ಲಾಂ ಸಮೀಪದ ಪ್ರದೇಶದಲ್ಲಿ ಆತಂಕ
ಸಿಕ್ಕಿಂ ಗಡಿ ಪ್ರದೇಶವು ಭಾರತದ ಭದ್ರತಾ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇದು 2017ರಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ದೀರ್ಘಕಾಲದ ಸಂಘರ್ಷ ನಡೆದಿದ್ದ ಡೋಕ್ಲಾಂ ಪ್ರದೇಶಕ್ಕೆ ಸಮೀಪದಲ್ಲಿದೆ. ಅಲ್ಲದೆ, ಈ ವಲಯವು ಪಶ್ಚಿಮ ಬಂಗಾಳದಲ್ಲಿರುವ ಸಿಲಿಗುರಿ ಕಾರಿಡಾರ್ಗೆ ಸಮೀಪದಲ್ಲಿದ್ದು, ಈ ಪ್ರದೇಶದ ಮೂಲಕವೇ ಈಶಾನ್ಯ ರಾಜ್ಯಗಳು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ.
ಇದೇ ವಿಚಾರವಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದು, ಚೀನಾದ ವಿರುದ್ಧ ಬಲವಾದ ಪ್ರತಿಭಟನೆ ನಡೆಸಬೇಕೆಂದು ಆಗ್ರಹಿಸಿದೆ.



