November 16, 2026
Monday, November 16, 2026
spot_img

ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್‌ ಲತೀಫ್‌ ಭಟ್‌ ಸೇರಿ ಇಬ್ಬರು ಉಗ್ರರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್‌ ಲತೀಫ್‌ ಭಟ್‌ ಸೇರಿದಂತೆ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಕಳೆದ ವಾರ ಸಿಆರ್‌ಪಿಎಫ್‌ ಶಿಬಿರದ ಮೇಲೆ ದಾಳಿ ನಡೆಸಿ ಮೂವರು ಯೋಧರನ್ನು ಗಾಯಗೊಳಿಸಿದ್ದ ಉಗ್ರರಿಗೆ ಭದ್ರತಾ ಪಡೆಗಳು ತಕ್ಕ ಉತ್ತರ ನೀಡಿವೆ. ನವೆಂಬರ್ 11ರಂದು ಕುಲ್ಗಾಮ್‌ನ ಮೀರ್ ಬಜಾರ್ ಸಮೀಪದ ಸಿಆರ್‌ಪಿಎಫ್ ಶಿಬಿರದ ಮೇಲೆ ಇಬ್ಬರು ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿತ್ತು. ದಾಳಿ ನಡೆಸಿದ ಬಳಿಕ ಉಗ್ರರು ಸಮೀಪದ ಅರಣ್ಯ ಪ್ರದೇಶದೊಳಗೆ ಪರಾರಿಯಾಗಿದ್ದರು. ಪರಾರಿಯಾದ ಉಗ್ರರಿಗಾಗಿ ಸೇನೆ ಹುಡುಕಾಟ ನಡೆಸಿತ್ತು.

ಸೋಮವಾರ ಕುಲ್ಗಾಮ್‌ನ ಅನುಮಾನಾಸ್ಪದ ಪ್ರದೇಶವೊಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ಪಡೆ ಜಂಟಿಯಾಗಿ ಪ್ರದೇಶವನ್ನು ಸುತ್ತುವರೆದಿದ್ದವು. ಈ ವೇಳೆ ಭದ್ರತಾ ಪಡೆಗಳನ್ನು ಕಂಡ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಹತರಾದವರಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಕೂಡ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read