ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಹಾಗೂ ರವಿ ದುಬೆ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ಆರಂಭದಲ್ಲಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಅದು ಗಳಿಕೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳುತ್ತಿದ್ದು, ಕೇವಲ 11 ದಿನಗಳಲ್ಲಿ ವಿಶ್ವದಾದ್ಯಂತ 1,384.50 ಕೋಟಿ ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಚಿತ್ರ ಬಿಡುಗಡೆಯಾದ 11ನೇ ದಿನವಾದ ಎರಡನೇ ಭಾನುವಾರವೂ ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ ಜೋರಾಗಿತ್ತು. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಭಾನುವಾರ ಒಂದೇ ದಿನ ಭಾರತದಲ್ಲಿ 75 ಕೋಟಿ ಹಾಗೂ 89.50 ಕೋಟಿ ಒಟ್ಟು ಗಳಿಕೆ ಕಂಡಿದೆ. ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗಳಿಕೆ 909 ಕೋಟಿ (760.60 ಕೋಟಿ) ತಲುಪಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಭಾನುವಾರದ 40 ಕೋಟಿ ಸೇರಿದಂತೆ ವಿದೇಶದಿಂದ ಒಟ್ಟು 475.50 ಕೋಟಿ ಹರಿದುಬಂದಿದೆ.
ಈ ಅಮೋಘ ಗಳಿಕೆಯೊಂದಿಗೆ ‘ರಾಮಾಯಣ’ 1,000 ಕೋಟಿ ಕ್ಲಬ್ ಸೇರಿದ ಭಾರತದ 11ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ, ರಣವೀರ್ ಸಿಂಗ್ ಅಭಿನಯದ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರದ ಜೀವಮಾನದ ಗಳಿಕೆಯನ್ನು (1,307.35 ಕೋಟಿ) ಕೇವಲ 11 ದಿನಗಳಲ್ಲಿ ಹಿಂದಿಕ್ಕಿದೆ. ಇದರ ಜೊತೆಗೆ ‘ಆರ್‌ಆರ್‌ಆರ್’ (1,230 ಕೋಟಿ), ‘ಕೆಜಿಎಫ್ 2’ (1,215 ಕೋಟಿ), ‘ಜವಾನ್’ (1,160 ಕೋಟಿ), ‘ಪಠಾಣ್’ (1,055 ಕೋಟಿ) ಹಾಗೂ ‘ಕಲ್ಕಿ 2898 ಎಡಿ’ (1,042.25 ಕೋಟಿ) ಚಿತ್ರಗಳ ದಾಖಲೆಗಳನ್ನೂ ‘ರಾಮಾಯಣ’ ಪುಡಿಗಟ್ಟಿದೆ.
ಸದ್ಯ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಟಾಪ್-5 ಚಿತ್ರಗಳ ಪಟ್ಟಿಗೆ ‘ರಾಮಾಯಣ’ ಲಗ್ಗೆ ಇಟ್ಟಿದೆ. ಈಗ ಈ ಚಿತ್ರದ ಮುಂದೆ ‘ಬಾಹುಬಲಿ 2’ (1,788 ಕೋಟಿ), ‘ಧುರಂಧರ್: ದಿ ರಿವೆಂಜ್’ (1,813 ಕೋಟಿ), ‘ಪುಷ್ಪ 2’ (1,871 ಕೋಟಿ) ಮತ್ತು ‘ದಂಗಲ್’ (2,000 ಕೋಟಿ) ಚಿತ್ರಗಳ ಬೃಹತ್ ದಾಖಲೆಗಳಿವೆ. ಇದೇ ವೇಗದಲ್ಲಿ ಮುನ್ನುಗ್ಗಿದರೆ ‘ರಾಮಾಯಣ’ ಶೀಘ್ರದಲ್ಲೇ 1,500 ಕೋಟಿ ಗಡಿ ದಾಟಿ ಮತ್ತಷ್ಟು ಹೊಸ ಮೈಲಿಗಲ್ಲು ಸ್ಥಾಪಿಸುವುದು ಖಚಿತವಾಗಿದೆ.



