November 16, 2026
Monday, November 16, 2026
spot_img

ದೀರ್ಘಕಾಲದ ಬೇಡಿಕೆಗಳು ಈಡೇರಿಲ್ಲ : ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕುಳಿತ ಆಶಾ ಕಾರ್ಯಕರ್ತೆಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

18 ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೂ ನಮಗೆ ಆರ್ಥಿಕ ಭದ್ರತೆ ಅನ್ನೋದಿಲ್ಲ. ಸರ್ಕಾರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿ ರಾಜ್ಯಾದ್ಯಂತ ಮಾನ್ಯತೆ ಪಡೆದಿರುವ ಆಶಾ ಕಾರ್ಯಕರ್ತೆಯರು ನಾಳೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ. ಕಳೆದ 18 ವರ್ಷಗಳಿಗೂ ಹೆಚ್ಚು ಕಾಲ ಆಶಾ ಕಾರ್ಯಕರ್ತೆಯರು ತಳಮಟ್ಟದಲ್ಲಿ ಅತ್ಯಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ಕ್ಷೇತ್ರಕಾರ್ಯ ನಿರ್ವಹಿಸುವುದರ ಜೊತೆಗೆ, ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತಾರೆ. ಆದರೆ ಅವರಿಗೆ ಆರ್ಥಿಕ ಅಥವಾ ಇನ್ಯಾವುದೇ ತೊಂದರೆಯಾದಾಗ ಸರ್ಕಾರ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.

ಇದರ ಜೊತೆಗೆ ಏಳು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು, ಇವು ಪೂರ್ಣಗೊಳ್ಳದೇ ಪ್ರತಿಭಟನೆ ನಿಲ್ಲಿಸುವ ಮಾತೇ ಇಲ್ಲ ಎಂದು ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದು ಕುಳಿತಿದ್ದಾರೆ. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15,000 ನಿಶ್ಚಿತ ಗೌರವಧನವನ್ನು ನಿಗದಿಪಡಿಸಬೇಕು, ಆನ್‌ಲೈನ್ ವರದಿ ಹಾಗೂ ದತ್ತಾಂಶ ದಾಖಲಾತಿಗಾಗಿ ಉತ್ತಮ ಗುಣಮಟ್ಟದ ಮೊಬೈಲ್ ಫೋನ್‌ಗಳನ್ನು ವಿತರಿಸಬೇಕು ಮತ್ತು ಮಾಸಿಕ ರೀಚಾರ್ಜ್ ಭತ್ಯೆ ನೀಡಬೇಕು, ಆಶಾ ಕಾರ್ಯಕರ್ತೆಯರಿಗೆ 6 ತಿಂಗಳ ವೇತನ ಸಹಿತ ಹೆರಿಗೆ ರಜೆ ಸೌಲಭ್ಯವನ್ನು ಜಾರಿಗೊಳಿಸಬೇಕು, ಆರೋಗ್ಯ ಇಲಾಖೆಗೆ ಸಂಬಂಧಪಡದ ಇತರೆ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸುವುದನ್ನು ತಕ್ಷಣವೇ ನಿಲ್ಲಿಸಬೇಕು, 2025ರ ಫೆಬ್ರವರಿ 25ರಿಂದ ಸೇವೆಯಿಂದ ಹಿಂಪಡೆಯಲಾಗಿರುವ ಆಶಾ ಸುಗಮಕಾರರನ್ನು ಸೂಕ್ತ ಸಂಭಾವನೆಯೊಂದಿಗೆ ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು, 2024–25ನೇ ಸಾಲಿನ ಹೆಚ್ಚುವರಿ ಮಾಸಿಕ ಪ್ರೋತ್ಸಾಹಧನವಾದ ₹1,500 ಸೇರಿದಂತೆ ಬಾಕಿ ಉಳಿದಿರುವ ಎಲ್ಲಾ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎನ್ನುವುದು ಇವರ ಪ್ರಮುಖ ಬೇಡಿಕೆಗಳಾಗಿವೆ.

Must Read