November 16, 2026
Monday, November 16, 2026
spot_img

ಬಿಲ್ಕಿಸ್‌ ಬಾನೋ ರೇ*ಪ್‌ ಕೇಸ್‌ : ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತು, ಜಾಮೀನು ನೀಡಿದ ಸುಪ್ರೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಲ್ಕಿಸ್‌ ಬಾನೋ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪದರಾಧಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಅಮಾನತುಗೊಳಿಸಿದ್ದು, ಜಾಮೀನು ಮಂಜೂರು ಮಾಡಿದೆ.

ಇಬ್ಬರು ಅಪರಾಧಿಗಳು 17 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿರುವುದನ್ನು ಪರಿಗಣನೆಗೆ ತೆಗೆದುಕೊಂಡು ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ. ಈ ಅಪರಾಧಿಗಳಲ್ಲಿ ಒಬ್ಬರು ತೀವ್ರ ಅಂಗವೈಕಲ್ಯದಿಂದ ಬಳಲುತ್ತಿರುವುದನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ. ಅಲ್ಲದೆ, ಅವರು ಸಲ್ಲಿಸಿರುವ ಮೇಲ್ಮನವಿಗಳಲ್ಲಿ ಸತ್ಯಾಂಶ ಮತ್ತು ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದು, ಅವುಗಳನ್ನು ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ತಿಳಿಸಿದೆ ಎನ್ನಲಾಗಿದೆ.

ಸತ್ಯಾಂಶ / ಕಾನೂನು

ಉಭಯ ಕಡೆಯವರ ವಾದವನ್ನು ಆಲಿಸಿದ ನಂತರ, ಮೇಲ್ಮನವಿದಾರರು ಹದಿನೇಳು ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ ಮತ್ತು ಅವರಲ್ಲಿ ಒಬ್ಬರು ತೀವ್ರ ಅಂಗವೈಕಲ್ಯವನ್ನು ಹೊಂದಿದ್ದಾರೆ ಎಂಬ ಅಂಶವನ್ನು ಗಮನಿಸಬೇಕಿದೆ. ಖಂಡಿತವಾಗಿಯೂ ಈ ಮೇಲ್ಮನವಿಯಲ್ಲಿ ಸತ್ಯಾಂಶ ಮತ್ತು ಕಾನೂನು ಎರಡಕ್ಕೂ ಸಂಬಂಧಿಸಿದಂತೆ ನಿರ್ಧರಿಸಬೇಕಾದ ವಿಷಯಗಳಿವೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.

ಈ ಇಬ್ಬರು ವ್ಯಕ್ತಿಗಳು, 2022ರ ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರದಿಂದ ಬಿಡುಗಡೆಗೊಂಡಿದ್ದ 11 ಅಪರಾಧಿಗಳ ಪೈಕಿ ಸೇರಿದ್ದಾರೆ. ಆದರೆ, 2024ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಈ ಬಿಡುಗಡೆಯ ಆದೇಶವನ್ನು ರದ್ದುಗೊಳಿಸಿತ್ತು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳಿಗೆ ನೀಡಲಾಗಿದ್ದ ಶಿಕ್ಷಾ ಕಡಿತವನ್ನು ನ್ಯಾಯಾಲಯವು ರದ್ದುಗೊಳಿಸಿತ್ತು.

ಘಟನೆ ಹಿನ್ನೆಲೆ ಏನು?

2002ರ ಗುಜರಾತ್‌ ಗಲಭೆ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್‌ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಇದರ ಜೊತೆಗೆ ಅವರ ಕುಟುಂಬದ 14 ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 11 ಮಂದಿ ದೋಷಿಗಳೆಂದು ಸಾಬೀತಾಗಿತ್ತು. ಸದ್ಯದ ಆದೇಶದ ಪ್ರಕಾರ, ಈ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದ್ದು, ನ್ಯಾಯಾಲಯದಲ್ಲಿ ಅವರ ಮೇಲ್ಮನವಿಗಳು ಬಾಕಿ ಇರುವವರೆಗೂ ಅವರಿಗೆ ಜಾಮೀನು ನೀಡಲಾಗಿದೆ.

Must Read