November 17, 2026
Tuesday, November 17, 2026
spot_img

ಹಾರ್ಮುಜ್ ಜಲಸಂಧಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ: 24‌ ಮಂದಿ ಭಾರತೀಯ ಸಿಬ್ಬಂದಿ ಸೇಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯಲ್ಲಿ 24 ಮಂದಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಪನಾಮ ಧ್ವಜದ ಎಲ್‌ಪಿಜಿ ಟ್ಯಾಂಕರ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಆದರೆ ಅದೃಷ್ಟವಶಾತ್ ಹಡಗಿನಲ್ಲಿದ್ದ 24 ಭಾರತೀಯರು ಸೇರಿದಂತೆ ಎಲ್ಲಾ 25 ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಇಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಸರ್ಬಾನಂದ ಸೋನೋವಾಲ್ ನೀಡಿದ ಮಾಹಿತಿ ಏನು?

ನವೆಂಬರ್ 16ರಂದು ‘ತಾರಾ ಗ್ಯಾಸ್’ (TARA GAS) ಎಂಬ ಎಲ್‌ಪಿಜಿ ಟ್ಯಾಂಕರ್ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದಾಗ ಕ್ಷಿಪಣಿ ದಾಳಿಗೆ ತುತ್ತಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವ ಸೋನೋವಾಲ್, ಭಾರತೀಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿದ್ದಾರೆ ಎಂದಿದ್ದಾರೆ. ನಾವಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹಡಗು ನಿರ್ವಹಣಾ ಕಂಪನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಹಾಗೂ ಎಲ್ಲಾ 25 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಸಮುದ್ರ ಭದ್ರತಾ ಆತಂಕ

ಕಳೆದ 24 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ನಾಲ್ಕು ತೈಲ ಟ್ಯಾಂಕರ್ ಹಡಗುಗಳಿಗೆ ಹಾನಿಯಾಗಿರುವ ವರದಿಗಳ ಬೆನ್ನಲ್ಲೇ ಈ ಘಟನೆ ನಡೆದಿದೆ. ಪೂರ್ವ ಹಾರ್ಮುಜ್ ಜಲಸಂಧಿಯ ನಿರ್ಬಂಧಿತ ವಲಯದಲ್ಲಿ ಸಂಚರಿಸುತ್ತಿದ್ದ ನಾಲ್ಕನೇ ಟ್ಯಾಂಕರ್ ಹಡಗೊಂದು ನೌಕಾಪಡೆಯ ನೆಲಬಾಂಬ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ನೌಕಾಪಡೆ ತಿಳಿಸಿದೆ.

ಇದನ್ನೂ ಓದಿ:

 ಸಶಸ್ತ್ರ ಪಡೆಗಳ ಅನುಮತಿಯಿಲ್ಲದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಬಂಧಿತ ಸಮುದ್ರ ಪ್ರದೇಶಕ್ಕೆ ಪ್ರವೇಶಿಸಿದರೆ ಇಂತಹ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ನೌಕಾಪಡೆ ಎಚ್ಚರಿಕೆ ನೀಡಿದೆ.  ಮತ್ತೊಂದೆಡೆ, ಒಮಾನ್‌ನ ಖಾಸಾಬ್‌ನಿಂದ ಏಳು ನಾಟಿಕಲ್ ಮೈಲಿ ದೂರದಲ್ಲಿ ಮತ್ತೊಂದು ಟ್ಯಾಂಕರ್ ಮೇಲೆ ದಾಳಿ ನಡೆದಿದ್ದು, ಅಲ್ಲಿಯೂ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ.

ಶನಿವಾರವಷ್ಟೇ ಹಾರ್ಮುಜ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳು ನೆಲಬಾಂಬ್‌ಗೆ ತಗುಲಿ ಸ್ಫೋಟಗೊಂಡಿದ್ದವು. ಈ ಸರಣಿ ಘಟನೆಗಳಿಂದಾಗಿ ಅಂತಾರಾಷ್ಟ್ರೀಯ ಹಡಗು ಸಂಚಾರದಲ್ಲಿ ತೀವ್ರ ಆತಂಕ ಮನೆಮಾಡಿದೆ.

Must Read

Skip to toolbar