ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ 2027ರ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ನಿರಾಸೆಯಾಗಿದೆ.
ಪ್ರಶಸ್ತಿಗಳಿಗಾಗಿ ಒಟ್ಟು ಎಂಟು ವಿಭಾಗಗಳಲ್ಲಿ ತನ್ನ ಸಂಗೀತವನ್ನು ಸಲ್ಲಿಸಿದ್ದರೂ, ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಚಿತ್ರ ವಿಫಲವಾಗಿದೆ. ಮತ್ತೊಂದೆಡೆ, ಇದೇ ಪ್ರಶಸ್ತಿ ಪಟ್ಟಿಯಲ್ಲಿ ತಮಿಳು ಹಾಡೊಂದು ಸ್ಥಾನ ಪಡೆಯುವ ಮೂಲಕ ಭಾರತೀಯ ಸಂಗೀತ ಕ್ಷೇತ್ರಕ್ಕೆ ಹೊಸ ಹೆಮ್ಮೆ ತಂದಿದೆ.
ಶಾಶ್ವತ್ ಸಚ್‌ದೇವ್ ಸಂಗೀತ ಸಂಯೋಜನೆಯ ‘ಧುರಂಧರ್ 2’ ಚಿತ್ರದ ಹಾಡುಗಳು ಭಾರತ ಸೇರಿದಂತೆ ಹಲವು ಕಡೆಗಳಲ್ಲಿ ಜನಪ್ರಿಯತೆ ಗಳಿಸಿದ್ದವು. ಈ ಹಿನ್ನೆಲೆಯಲ್ಲಿ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಚಿತ್ರದ ಸಂಗೀತಕ್ಕೆ ಮನ್ನಣೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಇದೀಗ ಹುಸಿಯಾಗಿದೆ.
ಇದನ್ನೂ ಓದಿ:
ಎಂಟು ವಿಭಾಗಗಳಲ್ಲಿ ಸಲ್ಲಿಕೆ
ಚಿತ್ರದ ಸಂಗೀತವನ್ನು ಬೆಸ್ಟ್ ಕಂಪಿಲೇಷನ್ ಸೌಂಡ್‌ಟ್ರ್ಯಾಕ್ ಫಾರ್ ವಿಷುವಲ್ ಮೀಡಿಯಾ, ಬೆಸ್ಟ್ ಸಾಂಗ್ ರೈಟನ್ ಫಾರ್ ವಿಷುವಲ್ ಮೀಡಿಯಾ ಸೇರಿದಂತೆ ಎಂಟು ವಿಭಾಗಗಳಲ್ಲಿ ಸಲ್ಲಿಸಲಾಗಿತ್ತು. ‘ಫಿರ್ ಸೆ’, ‘ಜಾನ್ ಸೆ ಗುಜರ್ತೆ ಹೈ’, ‘ಕನ್ಹಯ್ಯಾ’, ‘ಆರಿ ಆರಿ’, ‘ವಾರಿ ಜಾವನ್’, ‘ಜೈಯೇ ಸಜನ’, ‘ಡೆಸ್ಟಿನಿ-ಮನ್ ಅಟ್ಕೇಯಾ’ ಹಾಗೂ ‘ಹಮ್ ಪ್ಯಾರ್ ಕರ್ನೆ ವಾಲೆ’ ಹಾಡುಗಳು ಪ್ರಶಸ್ತಿ ಪರಿಗಣನೆಗೆ ಒಳಪಟ್ಟಿದ್ದವು. ಆದರೆ ಯಾವುದೇ ವಿಭಾಗದಲ್ಲೂ ನಾಮನಿರ್ದೇಶನ ಪಡೆಯಲಿಲ್ಲ.
ತಮಿಳು ಹಾಡಿಗೆ ಮೊದಲ ಬಾರಿಗೆ Grammy ಗೌರವ
‘ಧುರಂಧರ್ 2’ಗೆ ನಿರಾಸೆಯಾಗಿದ್ದರೂ, ಭಾರತೀಯ ಸಂಗೀತಕ್ಕೆ ಮತ್ತೊಂದು ಮಹತ್ವದ ಸಾಧನೆ ಒಲಿದಿದೆ. ಏಕಾಂಬರಂ ಮತ್ತು ಸುಷಾ ಹಾಡಿರುವ ‘ವರುವಾಯ್’ ತಮಿಳು ಗೀತೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಗ್ರ್ಯಾಮಿ ಇತಿಹಾಸದಲ್ಲಿ ತಮಿಳು ಹಾಡೊಂದು ಈ ವಿಭಾಗದಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು ಎಂಬುದು ವಿಶೇಷ.
ಇನ್ನು ಬ್ರಿಟಿಷ್ ಗಾಯಕಿ ರೇಯ್ 11 ನಾಮನಿರ್ದೇಶನಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ರೊಸಾಲಿಯಾ ಒಂಬತ್ತು ನಾಮನಿರ್ದೇಶನಗಳನ್ನು ಪಡೆದುಕೊಂಡಿದ್ದಾರೆ. ಗಾಯಕಿ ಬೆಯಾನ್ಸ್ 100 ಗ್ರ್ಯಾಮಿ ನಾಮನಿರ್ದೇಶನಗಳನ್ನು ಪಡೆದ ಮೊದಲ ಕಲಾವಿದೆ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.



