November 17, 2026
Tuesday, November 17, 2026
spot_img

ಯಲ್ಲಮ್ಮ ದೇವಿಗೆ ಸರ್ಪದೋಷದ ವದಂತಿ: ಭೀಮಾ ನದಿಯಲ್ಲಿ ಸಾವಿರಾರು ಮಹಿಳೆಯರಿಂದ ಸಾಮೂಹಿಕ ಸ್ನಾನ

ಹೊಸದಿಗಂತ ವರದಿ ಯಾದಗಿರಿ:

ಬೆಳಗಾವಿ ಜಿಲ್ಲೆ ಸವದತ್ತಿಯ ಸುಪ್ರಸಿದ್ಧ ಶ್ರೀ ಯಲ್ಲಮ್ಮ ದೇವಿಗೆ ಸರ್ಪ ದೋಷವಾಗಿದ್ದು, ದೇವಿ ಹೆಸರಲ್ಲಿ ಕಟ್ಟಿಕೊಂಡ ಪಾದ ಬದಲಿಸಬೇಕು ಎಂಬ ಗಾಳಿಸುದ್ದಿ ಗಿರಿಜಿಲ್ಲೆಯಲ್ಲಿ ವೈರಲ್ ಆಗಿದೆ.

ದೇವಿಗೆ ಸರ್ಪದೋಷ ನಿವಾರಣೆಯಾಗಲು ಆಕೆಯ ಹೆಸರಲ್ಲಿ ಕಟ್ಟಿಕೊಂಡ ಪಾದಗಳನ್ನು ತೆಗೆದು ಹೊಸಪಾದ ಧರಿಸಬೇಕು ಎಂಬ ವದಂತಿ ನಂಬಿದ ಜಿಲ್ಲೆಯ ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರು ಕೃಷ್ಣ ಮತ್ತು ಭೀಮಾ‌ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ.

ಪ್ರತಿ ಮಂಗಳವಾರ ಮತ್ತು ಶುಕ್ರವಾರ ನದಿಯಲ್ಲಿ‌ ಮಿಂದು ಹೊಸ ಬಟ್ಟೆ ಹಾಗೂ ಪಾದಗಳನ್ನು ಧರಿಸಬೇಕು ಎಂಬ ವದಂತಿ ಗಾಳ್ಗಿಚ್ಚಿನಂತೆ ಹರಡಿದ್ದು, ನಗರದ ಹೊರ ವಲಯದಲ್ಲಿನ ಭೀಮಾ ನದಿದಂಡೆಯಲ್ಲಿ ಮಂಗಳವಾರ ಸಾವಿರಾರು ಮಹಿಳೆಯರು ಆಗಮಿಸಿ ಅಭ್ಯಂಜನ ಮಾಡಿದ್ದಾರೆ.

ಇದನ್ನೂ ಓದಿ:

ಏಕಾಏಕಿ ನದಿದಂಡೆಯಲ್ಲಿ ಸಾವಿರಾರು ಮಹಿಳೆಯರು ಜಮಾಯಿಸಿದ ಕಾರಣ ಜನದಟ್ಟಣೆ ಹೆಚ್ಚಾಗಿ ಕಂಡುಬಂದಿತು. ಅಲ್ಲದೆ, ವಿಜಯಪುರ-ಹೈದಾರಾಬಾದ್ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿತು.

ಪ್ರಸಕ್ತ ಸಾಲಿನಲ್ಲಿ ಭೀಕರ ಬರ ಇರುವ ಕಾರಣ ಭೀಮಾ ನದಿ ಬತ್ತಿದೆ. ಇಂಥ ಸಂದರ್ಭದಲ್ಲಿ ಜನತೆ ಹಳೆಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿದಂಡೆ ಮತ್ತು ನದಿಯಲ್ಲಿ ಎಸೆಯುತ್ತಿರುವುದು ನದಿಯ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ನದಿ ಪಾತ್ರದಲ್ಲಿನ ತ್ಯಾಜ್ಯ ವಿಲೇವಾರಿ ಇದೀಗ ನಗರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಟ್ಟಾರೆ ಜನ ಮರುಳೋ, ಜಾತ್ರೆ ಮರುಳೋ ಎಂಬ ಗಾದೆ ಮಾತಿನಂತೆ ಯಲ್ಲಮ್ಮ ದೇವಿಗೆ ಸರ್ಪದೋಷವಾಗಿದೆ ಎಂದು ನಂಬಿದ್ದು ವಿಚಿತ್ರವೆನಿಸಿದೆ.

Must Read