ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ರಾಜಕೀಯದಲ್ಲಿ ಅಪರೂಪದ ರಾಜತಾಂತ್ರಿಕ ಕ್ಷಣವೊಂದಕ್ಕೆ ಚೀನಾದ ಶೆನ್ಜೆನ್ ನಗರ ಸಾಕ್ಷಿಯಾಗಿದೆ. ಅಪೆಕ್ (APEC) ಶೃಂಗಸಭೆಯ ಅಂಗವಾಗಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ರೆಡ್ ಕಾರ್ಪೆಟ್ ಮೇಲೆ ಆತ್ಮೀಯ ಭೇಟಿ
ಗುರುವಾರ ಈ ಮೂವರು ನಾಯಕರ ನಡುವೆ ನಡೆಯಲಿರುವ ಮಹತ್ವದ ತ್ರಿಪಕ್ಷೀಯ ಸಭೆಗೂ ಮುನ್ನ ಈ ಅಪರೂಪದ ಭೇಟಿ ನಡೆದಿದೆ. ಔತಣಕೂಟದ ರೆಡ್ ಕಾರ್ಪೆಟ್ ಮೇಲೆ ಕ್ಸಿ ಜಿನ್ಪಿಂಗ್ ಮತ್ತು ಅವರ ಪತ್ನಿ ಟ್ರಂಪ್ ಅವರೊಂದಿಗೆ ನಿಂತು ಮಾತನಾಡುತ್ತಿದ್ದಾಗ, ರಷ್ಯಾ ಅಧ್ಯಕ್ಷ ಪುಟಿನ್ ಅವರ ಬಳಿಗೆ ನಡೆದು ಬಂದರು,.
ಈ ವೇಳೆ ಟ್ರಂಪ್ ಮತ್ತು ಪುಟಿನ್ ಪರಸ್ಪರ ಹಸ್ತಲಾಘವ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ಇಬ್ಬರೂ ನಾಯಕರು ಪರಸ್ಪರ ಭುಜ ತಟ್ಟಿಕೊಂಡು ಆತ್ಮೀಯತೆ ಪ್ರದರ್ಶಿಸಿದರೆ, ಪಕ್ಕದಲ್ಲೇ ನಿಂತಿದ್ದ ಕ್ಸಿ ಜಿನ್ಪಿಂಗ್ ಇದನ್ನು ನಗುತ್ತಾ ವೀಕ್ಷಿಸಿದರು. ನಂತರ ಮೂವರು ನಾಯಕರು ಒಟ್ಟಿಗೆ ನಿಂತು ಗ್ರೂಪ್ ಫೋಟೋಗೆ ಪೋಸ್ ನೀಡಿದರು. ರಷ್ಯಾ ಅಧ್ಯಕ್ಷರ ಕಚೇರಿಯ ಮಾಧ್ಯಮ ತಂಡವು ಈ ಐತಿಹಾಸಿಕ ಕ್ಷಣದ ವಿಡಿಯೋವನ್ನು ಟೆಲಿಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಒಂದು ವರ್ಷದ ಬಳಿಕ ಟ್ರಂಪ್-ಪುಟಿನ್ ಮುಖಾಮುಖಿ
2025ರ ಆಗಸ್ಟ್ನಲ್ಲಿ ಅಲಾಸ್ಕಾದಲ್ಲಿ ನಡೆದ ರಷ್ಯಾ-ಅಮೆರಿಕ ಶೃಂಗಸಭೆಯ ಬಳಿಕ ಟ್ರಂಪ್ ಮತ್ತು ಪುಟಿನ್ ಭೇಟಿಯಾಗಿರಲಿಲ್ಲ. ಇದೀಗ ಸುಮಾರು ಒಂದು ವರ್ಷದ ನಂತರ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದು, ಕೆಲವೇ ಕ್ಷಣಗಳ ಕಾಲ ನಡೆದ ಈ ಮಾತುಕತೆ ಅತ್ಯಂತ ಸೌಹಾರ್ದಯುತವಾಗಿತ್ತು ಎಂದು ಹೇಳಲಾಗುತ್ತಿದೆ.
ಚೀನಾದಲ್ಲಿ ಭವ್ಯ ಸ್ವಾಗತ
ಟ್ರಂಪ್ ಆಗಮನಕ್ಕೂ ಕೆಲವು ಗಂಟೆಗಳ ಮೊದಲೇ ಶೆನ್ಜೆನ್ ತಲುಪಿದ್ದ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. “ಮಾಸ್ಕೋ ಮತ್ತು ಬೀಜಿಂಗ್ ಅನುಸರಿಸುತ್ತಿರುವ ವಿದೇಶಾಂಗ ನೀತಿ ಯಶಸ್ವಿಯಾಗುತ್ತಿದೆ” ಎಂದು ಈ ವೇಳೆ ಪುಟಿನ್ ಹೇಳಿದ್ದಾರೆ.
ಇದನ್ನೂ ಓದಿ:
ಇದಾದ ಬಳಿಕ ‘ಏರ್ ಫೋರ್ಸ್ ಒನ್’ ವಿಮಾನದಲ್ಲಿ ಶೆನ್ಜೆನ್ಗೆ ಬಂದಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖುದ್ದು ಕ್ಸಿ ಜಿನ್ಪಿಂಗ್ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡರು. ಟ್ರಂಪ್ ಅವರಿಗೆ ಚೀನಾ ಸರ್ಕಾರವು ಸೇನಾ ಗೌರವ ವಂದನೆ, ಮಕ್ಕಳಿಂದ ಹೂಗುಚ್ಛ ಮತ್ತು ಆಗಸದಲ್ಲಿ ಯುದ್ಧ ವಿಮಾನಗಳ ಹಾರಾಟದ ಮೂಲಕ ಭವ್ಯ ಸ್ವಾಗತ ನೀಡಿತು ಎಂದು ವರದಿ ತಿಳಿಸಿವೆ.



