ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 5 ರಂದು ತೆರೆಕಂಡ ‘ರಾಮಾಯಣ ಭಾಗ-1’ ಭಾರತ ಮಾತ್ರವಲ್ಲದೆ ಥೈಲ್ಯಾಂಡ್ ಸೇರಿದಂತೆ ವಿಶ್ವದಾದ್ಯಂತ ಪ್ರೇಕ್ಷಕರ ಮನಗೆದ್ದಿದೆ. ಕಥೆಯ ಹಿನ್ನೆಲೆ ಗೊತ್ತಿಲ್ಲದ ವಿದೇಶಿ ಪ್ರೇಕ್ಷಕರೂ ಈ ಮಹಾಕಾವ್ಯಕ್ಕೆ ಮಾರುಹೋಗಿದ್ದು, ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಈಗಾಗಲೇ 800 ಕೋಟಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ರವಿ ದುಬೆ ಅವರ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಭಿಮಾನಿಗಳಿಗೆ ಸಿಹಿಸುದ್ದಿ
ಮೊದಲ ಭಾಗದ ಅಂತ್ಯದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಹನುಮಂತನ ಪಾತ್ರದ ಸಣ್ಣ ಝಲಕ್ ತೋರಿಸಲಾಗಿತ್ತು. ಆದರೆ, ಹನುಮಂತನ ಮುಖವನ್ನು ಸರಿಯಾಗಿ ತೋರಿಸದ ಕಾರಣ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿತ್ತು. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಚಿತ್ರದ ಛಾಯಾಗ್ರಾಹಕ ಪಂಕಜ್ ಕುಮಾರ್, “ಮೊದಲ ಭಾಗದಲ್ಲಿ ಹನುಮಂತನ ಪಾತ್ರವನ್ನು ಕೇವಲ ಒಂದು ಸಣ್ಣ ಸುಳಿವಿನಂತೆ ತೋರಿಸಬೇಕೆಂದು ಕಥೆಯಲ್ಲೇ ನಿರ್ಧರಿಸಲಾಗಿತ್ತು. ಆದರೆ ಎರಡನೇ ಭಾಗದಲ್ಲಿ ಹನುಮಂತನ ಅದ್ಭುತ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಿದ್ದೇವೆ. ದೊಡ್ಡ ಪರದೆಯ ಮೇಲೆ ಅವರನ್ನು ನೋಡುವುದೇ ಒಂದು ರೋಮಾಂಚಕ ಅನುಭವವಾಗಲಿದೆ” ಎಂದು ಭರವಸೆ ನೀಡಿದ್ದಾರೆ.
ಶೇ. 60ರಷ್ಟು ಚಿತ್ರೀಕರಣ ಪೂರ್ಣ
ಪಂಕಜ್ ಕುಮಾರ್ ಅವರು ಸೀಕ್ವೆಲ್‌ನ ತಾಂತ್ರಿಕ ಶ್ರೀಮಂತಿಕೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. “ರಾಮಾಯಣ ಭಾಗ-2ರ ಶೇ. 60ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗವು ಇನ್ನೂ ಹೆಚ್ಚು ಅದ್ಧೂರಿಯಾಗಿ ಮೂಡಿಬರಲಿದೆ. ಹನುಮಂತ ಮತ್ತು ಇಡೀ ವಾನರ ಸೇನೆಯ ಪಾತ್ರಗಳು ಗ್ರಾಫಿಕ್ಸ್ ಮೂಲಕ ಜೀವ ಪಡೆಯಲಿರುವುದರಿಂದ, ವಿಎಫ್‌ಎಕ್ಸ್ ಮತ್ತು ಮೋಷನ್ ಕ್ಯಾಪ್ಚರ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.
2028ರ ದೀಪಾವಳಿಗೆ ‘ರಾಮಾಯಣ ಭಾಗ-2’ ತೆರೆಗೆ ಬರಲಿದ್ದು, ರಾಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಲಾರಾ ದತ್ತಾ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಒಟ್ಟಿನಲ್ಲಿ, ಹನುಮಂತನ ಪೂರ್ಣ ದರುಶನಕ್ಕಾಗಿ ಅಭಿಮಾನಿಗಳು ಈಗಿನಿಂದಲೇ ಕಾತರದಿಂದ ಕಾಯುವಂತಾಗಿದೆ.



