November 18, 2026
Wednesday, November 18, 2026
spot_img

ವರುಣಾದಲ್ಲಿ ಸಿದ್ದರಾಮಯ್ಯಗೆ ಅದ್ದೂರಿ ಸ್ವಾಗತ: ‘ಮತ್ತೆ ಸಿಎಂ ಆಗಬೇಕು’ ಎಂದು ಅಭಿಮಾನಿಗಳ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

“ನಾನು ದೇವರನ್ನು ಪೂಜೆ ಮಾಡುವುದಿಲ್ಲ. ಆದರೆ, ದೇವರಿಲ್ಲ ಎಂದು ಹೇಳುವುದಿಲ್ಲ; ದೇವರಿದ್ದಾನೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬುಧವಾರ ತಮ್ಮ ತವರು ಕ್ಷೇತ್ರ ವರುಣಾದ ಹೊಸಕೆಂಪಯ್ಯನಹುಂಡಿಯಲ್ಲಿ ಆಯೋಜಿಸಲಾಗಿದ್ದ ಮೂಗುಮಾರಮ್ಮ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮಸ್ಥರ ಅದ್ದೂರಿ ಸ್ವಾಗತದ ನಡುವೆ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಸಾಥ್ ನೀಡಿದರು. ಈ ವೇಳೆ ಅಭಿಮಾನಿಗಳು ಮತ್ತು ಬೆಂಬಲಿಗರು ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಘೋಷಣೆಗಳನ್ನು ಕೂಗಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. “ರಾಜ್ಯದ 7 ಕೋಟಿ ಜನರ ಆಶೀರ್ವಾದ ನಿಮ್ಮ ಮೇಲಿದೆ, ನೀವು ಮತ್ತೊಮ್ಮೆ ಸಿಎಂ ಆಗಬೇಕು” ಎಂದು ಅಭಿಮಾನಿಗಳು ಒತ್ತಾಯಿಸಿದರು.

ಕೆಟ್ಟ ಕೆಲಸ ಮಾಡಿ ದೇವರಲ್ಲಿ ಬೇಡಿದರೆ ಫಲವಿಲ್ಲ

ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, “ದೇವರನ್ನು ಒಲಿಸಿಕೊಳ್ಳಲು ಪೂಜೆ ಒಂದು ಮಾರ್ಗವಾಗಿದೆ. ಆದರೆ ಅದನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಕೆಟ್ಟ ಕೆಲಸಗಳನ್ನು ಮಾಡಿ ದೇವರ ಬಳಿ ಹೋಗಿ ಪ್ರಾರ್ಥನೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ” ಎಂದು ಮಾರ್ಮಿಕವಾಗಿ ನುಡಿದರು. ಇದೇ ವೇಳೆ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಅವರು, “ರಾಜ್ಯದ 240 ತಾಲ್ಲೂಕುಗಳ ಪೈಕಿ 220 ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಭೀಕರ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರ ಈಗಾಗಲೇ ರೈತರಿಗೆ ಬರ ಪರಿಹಾರ ನೀಡಿದೆ, ಆದರೆ ಕೇಂದ್ರ ಸರ್ಕಾರದಿಂದ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ಸಿಎಂ ಅಲ್ಲ, ಬರೀ ಶಾಸಕ ಮಾತ್ರ’

ಭಾಷಣದ ನಡುವೆ ರೈತರು ಕಾಲುವೆಗಳಿಗೆ ನೀರು ಬಿಡಿಸುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಅವರು, “ನಾನು ಈಗ ಮುಖ್ಯಮಂತ್ರಿಯಲ್ಲ, ಕೇವಲ ಒಬ್ಬ ಶಾಸಕ ಮಾತ್ರ” ಎಂದು ಹೇಳಿದರು.

ಇದನ್ನೂ ಓದಿ:

5ನೇ ಸಾಲಿನ ಆಸನ ವಿವಾದಕ್ಕೆ ತೆರೆ ಎಳೆದ ಸಿದ್ದರಾಮಯ್ಯ

ಇದೇ ಸಂದರ್ಭದಲ್ಲಿ, ದೆಹಲಿಯಲ್ಲಿ ಸೋಮವಾರ ನಡೆದ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಾವು 5ನೇ ಸಾಲಿನಲ್ಲಿ ಕುಳಿತಿದ್ದ ವಿಚಾರದ ಕುರಿತು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಮಾತನಾಡಿದ ಅವರು, “ನಾನು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಹೋಗಿದ್ದೆ. ಅಷ್ಟರಲ್ಲಾಗಲೇ ಮುಂದಿನ ಸಾಲಿನ ಎಲ್ಲಾ ಆಸನಗಳು ಭರ್ತಿಯಾಗಿದ್ದವು. ಹೀಗಾಗಿ ಅನಿವಾರ್ಯವಾಗಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕಾಯಿತು, ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

Must Read

Skip to toolbar