ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ ಸಿನಿಮಾ ‘ಮೈಸಾ’ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಇದರ ಬೆನ್ನಲ್ಲೇ ಚಿತ್ರತಂಡವು ಸಿನಿಮಾದ ಹೊಸ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದು, ಚಿತ್ರದ ಕಥಾಹಂದರದ ಕುರಿತು ಪ್ರೇಕ್ಷಕರಿಗೆ ಮತ್ತೊಂದು ಸುಳಿವು ನೀಡಿದೆ.
ಅಪ್ಪ-ಮಗಳ ಭಾವನಾತ್ಮಕ ಬಾಂಧವ್ಯವೇ ಕಥೆಯ ಜೀವಾಳ
ಸಾಮಾನ್ಯವಾಗಿ ಆ್ಯಕ್ಷನ್ ಸಿನಿಮಾಗಳಲ್ಲಿ ತಾಯಿ-ಮಗನ ಸೆಂಟಿಮೆಂಟ್ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ‘ಮೈಸಾ’ ಸಿನಿಮಾದಲ್ಲಿ ಅಪ್ಪ ಮತ್ತು ಮಗಳ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಕಥೆಯ ಕೇಂದ್ರಬಿಂದುವಾಗಿ ಇರಿಸಲಾಗಿದೆ. ಇದೀಗ ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಕೂಡ ಇದೇ ಸುಂದರ ಸಂಬಂಧವನ್ನು ಎತ್ತಿ ತೋರಿಸುತ್ತಿದೆ. ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, “ಅಪ್ಪ-ಮಗಳ ಸುಂದರ ಬಾಂಧವ್ಯವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕೇವಲ 9 ದಿನಗಳು ಮಾತ್ರ ಬಾಕಿ. ನವೆಂಬರ್ 27ರಂದು ‘ಮೈಸಾ’ ಭರ್ಜರಿಯಾಗಿ ತೆರೆಗೆ ಬರಲಿದೆ” ಎಂದು ಬರೆದುಕೊಂಡಿದೆ.
ವಿಭಿನ್ನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ
ರವೀಂದ್ರ ಪುಲ್ಲೆ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಬುಡಕಟ್ಟು ಪ್ರದೇಶದ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ರಶ್ಮಿಕಾ ‘ಗೊಂಡ ಬುಡಕಟ್ಟು ಮಹಿಳೆ’ಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು ವಿಶೇಷ ದೈಹಿಕ ತರಬೇತಿಯನ್ನೂ ಪಡೆದಿದ್ದು, ಟೀಸರ್‌ನಲ್ಲಿ ಬೈಕ್ ರೈಡಿಂಗ್ ಹಾಗೂ ನೀರಿನೊಳಗಿನ ಸಾಹಸ ದೃಶ್ಯಗಳಲ್ಲಿ ಮಿಂಚಿದ್ದರು.
ಇದನ್ನೂ ಓದಿ:
ತಾರಾಗಣ
‘ಅನ್‌ಫಾರ್ಮುಲಾ ಫಿಲ್ಮ್ಸ್’ ನಿರ್ಮಾಣದ ಈ ಚಿತ್ರಕ್ಕೆ ಜೇಕ್ಸ್ ಬಿಜೋಯ್ ಸಂಗೀತ ನೀಡಿದ್ದು, ಶ್ರೇಯಸ್ ಕೆ. ಕೃಷ್ಣ ಛಾಯಾಗ್ರಹಣವಿದೆ. ಅಂತಾರಾಷ್ಟ್ರೀಯ ಸಾಹಸ ನಿರ್ದೇಶಕ ಆಂಡಿ ಲಾಂಗ್ ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್, ರಾಹುಲ್ ರವೀಂದ್ರನ್, ಸಮುದ್ರಖನಿ, ಶಿವ ಕಂದುಕೂರಿ ಹಾಗೂ ಕನ್ನಡದ ನಟ ತಾರಕ್ ಪೊನ್ನಪ್ಪ ಸೇರಿದಂತೆ ದೊಡ್ಡ ತಾರಾಗಣವಿದೆ. ಇದೇ ತಿಂಗಳ 27 ರಂದು ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



