ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಆವೃತ್ತಿಗೆ ಈಗಾಗಲೇ ಭರ್ಜರಿ ವೇದಿಕೆ ಸಿದ್ಧವಾಗಿದೆ. ನವೆಂಬರ್ 17ರಂದು ಆಟಗಾರರ ಉಳಿಸಿಕೊಳ್ಳುವಿಕೆ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದ್ದು, ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹರಾಜಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಆದರೆ, ಈ ರೋಚಕ ಹರಾಜಿಗೂ ಮುನ್ನವೇ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಎದುರಾಗಿದೆ. ಮುಂಬರುವ ಐಪಿಎಲ್ ಸೀಸನ್‌ನಿಂದ ಐವರು ಪ್ರಮುಖ ಆಟಗಾರರು ಅಧಿಕೃತವಾಗಿ ಹೊರಗುಳಿದಿದ್ದಾರೆ.
ಮೈದಾನಕ್ಕೆ ಗುಡ್‌ಬೈ ಹೇಳಿದ ದಿಗ್ಗಜರು
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೀವಾಳವಾಗಿದ್ದ ಮಹೇಂದ್ರ ಸಿಂಗ್ ಧೋನಿ, ಆಟಗಾರನಾಗಿ ಐಪಿಎಲ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಮುಂಬರುವ ಸೀಸನ್‌ನಲ್ಲಿ ಅವರು ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುವುದಿಲ್ಲ. ಬದಲಾಗಿ, ಚೆನ್ನೈ ತಂಡದ ಮಾರ್ಗದರ್ಶಕರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮತ್ತೊಂದೆಡೆ, ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಕೂಡ ನಿವೃತ್ತಿ ಘೋಷಿಸಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅವರನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಐಪಿಎಲ್‌ನಲ್ಲಿ ರಹಾನೆ ಅವರ ಸುದೀರ್ಘ ಪಯಣಕ್ಕೆ ತೆರೆ ಬಿದ್ದಿದೆ.
ಆಸೀಸ್ ಸ್ಟಾರ್‌ಗಳ ಹಿಂದೇಟು
ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 2027ರ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಆ್ಯಶಸ್ ಸರಣಿಯಂತಹ ಮಹತ್ವದ ಟೆಸ್ಟ್ ಪಂದ್ಯಗಳಿಗೆ ಸಜ್ಜಾಗಲು ಮತ್ತು ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇವರ ಜೊತೆಗೆ ಆಸ್ಟ್ರೇಲಿಯಾದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಕೂಡ 2027ರ ಏಕದಿನ ವಿಶ್ವಕಪ್ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಐಪಿಎಲ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಆರ್‌ಸಿಬಿ ಆಟಗಾರನಿಗೆ ಗಾಯದ ಬರೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರವಸೆಯ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಜುಲೈ ತಿಂಗಳಿನಿಂದ ಕ್ರಿಕೆಟ್ ಮೈದಾನದಿಂದ ದೂರವಿರುವ ಅವರು ಇತ್ತೀಚೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಕೆಯ ಹಂತದಲ್ಲಿ ಮತ್ತೆ ಹಿನ್ನಡೆಯಾದ ಕಾರಣ, ಈ ಬಾರಿಯ ಐಪಿಎಲ್‌ನಲ್ಲಿ ಅವರು ಆಡುತ್ತಿಲ್ಲ.
ಒಟ್ಟಿನಲ್ಲಿ, ಈ ಐವರು ಪ್ರಮುಖ ಆಟಗಾರರ ಅನುಪಸ್ಥಿತಿಯು ಡಿಸೆಂಬರ್ 16ರ ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳ ರಣತಂತ್ರವನ್ನು ಸಂಪೂರ್ಣವಾಗಿ ಬದಲಿಸುವುದು ಖಚಿತವಾಗಿದೆ.



