November 18, 2026
Wednesday, November 18, 2026
spot_img

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಆರ್.ಹಿತೇಂದ್ರ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಸರ್ಕಾರವು ಬುಧವಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ಬರೋಬ್ಬರಿ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಮೂಲಕ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯ ಆಡಳಿತಾತ್ಮಕ ಸ್ವರೂಪಕ್ಕೆ ಹೊಸ ರೂಪ ನೀಡಲಾಗಿದೆ. ಇಲ್ಲಿಯವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ‘ಮುಖ್ಯ ಪೊಲೀಸ್ ಆಯುಕ್ತ’ರಾಗಿ ನೇಮಕ ಮಾಡಲಾಗಿದೆ.

ಐದು ವಲಯಗಳಿಗೆ ನೂತನ ಪೊಲೀಸ್ ಆಯುಕ್ತರು

ಆಡಳಿತಾತ್ಮಕ ಅನುಕೂಲಕ್ಕಾಗಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ಪ್ರತ್ಯೇಕ ವಲಯಗಳಾಗಿ ವಿಂಗಡಿಸಿ, ಪ್ರತಿ ವಲಯಕ್ಕೂ ಪ್ರತ್ಯೇಕ ಪೊಲೀಸ್ ಆಯುಕ್ತರನ್ನು ನೇಮಿಸಲಾಗಿದೆ. ಅದರಂತೆ ಕೇಂದ್ರ ಬೆಂಗಳೂರು ಆಯುಕ್ತರಾಗಿ ಲಾಭೂರಾಮ್, ಪೂರ್ವ ವಿಭಾಗಕ್ಕೆ ಡಾ. ಪಿ.ಎಸ್. ಹರ್ಷ, ಪಶ್ಚಿಮ ವಿಭಾಗಕ್ಕೆ ವಿಕಾಸ್ ಕುಮಾರ್ ವಿಕಾಸ್ ಹಾಗೂ ಉತ್ತರ ಬೆಂಗಳೂರು ಆಯುಕ್ತರಾಗಿ ಡಾ. ಎಂ.ಬಿ. ಬೋರಲಿಂಗಯ್ಯ ಅವರನ್ನು ನಿಯೋಜಿಸಲಾಗಿದೆ. ಆಡಳಿತ ವಿಭಾಗದ ಜಂಟಿ ಆಯುಕ್ತ ಸಿ. ವಂಶಿ ಕೃಷ್ಣ ಅವರಿಗೆ ದಕ್ಷಿಣ ಬೆಂಗಳೂರು ಆಯುಕ್ತರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಹಿರಿಯ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ನಗರ ಸಂಚಾರ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಗಿದ್ದು, ರೌಡಿ ನಿಗ್ರಹ ದಳದ ಹೆಚ್ಚುವರಿ ಹೊಣೆಯನ್ನೂ ವಹಿಸಲಾಗಿದೆ.

ರಾಜ್ಯ ಮಟ್ಟದ ಪ್ರಮುಖ ವರ್ಗಾವಣೆಗಳು

ರಾಜ್ಯದ ಇತರ ಪ್ರಮುಖ ಹುದ್ದೆಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಬಿಜಯ್ ಕುಮಾರ್ ಸಿಂಗ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ, ಎಸ್. ಮುರುಗನ್ ಅವರನ್ನು ಲೋಕಾಯುಕ್ತ ಎಡಿಜಿಪಿಯಾಗಿ ಹಾಗೂ ಮನೀಶ್ ಖರ್ಬಿಕರ್ ಅವರನ್ನು ಸಂವಹನ ಮತ್ತು ಆಧುನೀಕರಣ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ.

ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್, ಕೆಎಸ್‌ಆರ್‌ಪಿ ಐಜಿಪಿಯಾಗಿ ಅನುಪಮ್ ಅಗರ್ವಾಲ್, ರೈಲ್ವೆ ಡಿಐಜಿಯಾಗಿ ಡಾ. ಶರಣಪ್ಪ ಎಸ್.ಡಿ. ಹಾಗೂ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ವರ್ಗಾಯಿಸಲಾಗಿದೆ. ಇದರೊಂದಿಗೆ ಬೆಂಗಳೂರಿನ ವಿವಿಧ ವಿಭಾಗಗಳ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗಕ್ಕೂ ನೂತನ ಡಿಸಿಪಿಗಳನ್ನು ನಿಯೋಜಿಸಲಾಗಿದೆ.

ಕೃತಜ್ಞತೆ ಸಲ್ಲಿಸಿದ ಸೀಮಂತ್ ಕುಮಾರ್

ವರ್ಗಾವಣೆ ಆದೇಶದ ಬಳಿಕ ತಮ್ಮ ಅಧಿಕಾರಾವಧಿಯ ಅನುಭವ ಹಂಚಿಕೊಂಡ ನಿರ್ಗಮಿತ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ಪೊಲೀಸ್ ವ್ಯವಸ್ಥೆಯನ್ನು ಐದು ವಲಯಗಳಾಗಿ ವಿಂಗಡಿಸಿರುವುದರಿಂದ ತಾನು “ಅವಿಭಜಿತ ಬೆಂಗಳೂರಿನ ಕೊನೆಯ ಪೊಲೀಸ್ ಆಯುಕ್ತ”ನಾಗಿ ಸೇವೆ ಸಲ್ಲಿಸಿದ ಹೆಮ್ಮೆ ಇದೆ ಎಂದು ಭಾವುಕರಾದರು. ಕಳೆದ ಒಂದೂವರೆ ವರ್ಷಗಳ ಕಾಲ ಜನಸ್ನೇಹಿ ಪೊಲೀಸ್ ವ್ಯವಸ್ಥೆ, ಪ್ರತಿ ಮಂಗಳವಾರದ ನೇರ ಸಂವಾದ ಹಾಗೂ ಮಾದಕ ವಸ್ತು ಮುಕ್ತ ಬೆಂಗಳೂರಿಗಾಗಿ ಶ್ರಮಿಸಲು ಸಹಕರಿಸಿದ ಇಡೀ ಪೊಲೀಸ್ ತಂಡ, ಸರ್ಕಾರ, ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಅವರು ಕೃತಜ್ಞತೆ ಸಲ್ಲಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.

Must Read

Skip to toolbar