November 19, 2026
Thursday, November 19, 2026
spot_img

15 ಕೋಟಿ ನಗದು, ಸಿಸಿಟಿವಿ ಇಲ್ಲದ ಇಂಟರ್ವ್ಯೂ: ಕೆಪಿಎಸ್‌ಸಿ ಹಗರಣದ ರಹಸ್ಯ ಬಿಚ್ಚಿಟ್ಟ ಕನ್ನಾಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ದಿನಕ್ಕೊಂದು ಸತ್ಯಗಳು ಹೊರಬರುತ್ತಿವೆ. ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಧ್ಯವರ್ತಿ ಬಸವರಾಜ್ ಕನ್ನಾಳೆ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಅಸಲಿ ಮುಖವನ್ನು ತನಿಖಾಧಿಕಾರಿಗಳ ಮುಂದೆ ಬಯಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಐಪಿಎಸ್ ಅಧಿಕಾರಿ ಮನೆಯಿಂದಲೇ 2 ಕೋಟಿ ರೂ. ಕಲೆಕ್ಷನ್

ಕೆಎಎಸ್ ಸಂದರ್ಶನ ನಡೆಯುವ ಮೊದಲೇ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳಿಗೆ ಸರ್ಕಾರಿ ಹುದ್ದೆ ಕೊಡಿಸಲು ದೊಡ್ಡ ಮಟ್ಟದ ಡೀಲ್ ನಡೆದಿತ್ತು ಎಂದು ಬಸವರಾಜ್ ಕನ್ನಾಳೆ ಇಡಿ ಮುಂದೆ ಹೇಳಿಕೆ ನೀಡಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹೇಳಿದಂತೆ ತಾನು ನೇರವಾಗಿ ಆ ಐಪಿಎಸ್ ಅಧಿಕಾರಿಯ ಮನೆಗೆ ಹೋಗಿ ಹಣ ಪಡೆದಿದ್ದಾಗಿ ಕನ್ನಾಳೆ ತಿಳಿಸಿದ್ದಾರೆ. ಆ ಬಳಿಕ ಜ್ಞಾನೇಂದ್ರ ಕುಮಾರ್ ಸೂಚನೆಯಂತೆಯೇ ಅದೇ 2 ಕೋಟಿ ರೂಪಾಯಿಯನ್ನು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ತಲುಪಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಜಯಮಹಲ್ ಮನೆಗೆ 15 ಕೋಟಿ ರೂ. ನಗದು ತಲುಪಿಸಿದ್ದೆ

ಕಳೆದ ಮೂರು ವರ್ಷಗಳಲ್ಲಿ ವಿವಿಧ ಇಲಾಖಾ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿ ಬರೋಬ್ಬರಿ 12 ರಿಂದ 15 ಕೋಟಿ ರೂಪಾಯಿ ನಗದು ಸಂಗ್ರಹಿಸಲಾಗಿದೆ ಎಂದು ಕನ್ನಾಳೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಸಂಗ್ರಹಿಸಿದ ಈ ಸಂಪೂರ್ಣ 15 ಕೋಟಿ ರೂ. ಹಣವನ್ನು ತಾನೇ ಖುದ್ದಾಗಿ ಜಯಮಹಲ್‌ನಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ನಿವಾಸಕ್ಕೆ ಹೋಗಿ ನಗದು ರೂಪದಲ್ಲೇ ಕೊಟ್ಟಿರುವುದಾಗಿ ಇಡಿ ಅಧಿಕಾರಿಗಳ ಮುಂದೆ ತಿಳಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ತನಗೆ 15 ಕೋಟಿ ಕೊಟ್ಟಿದ್ದೇನೆ ಎಂಬ ಕನ್ನಾಳೆಯ ಮಾತನ್ನು ಜ್ಞಾನೇಂದ್ರ ಕುಮಾರ್ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ:

ಸಿಸಿಟಿವಿ ಇಲ್ಲದ ಜಾಗದಲ್ಲಿ ಅಭ್ಯರ್ಥಿಗಳ ಇಂಟರ್ವ್ಯೂ

ತನಿಖೆಯ ವೇಳೆ ನೇಮಕಾತಿ ಪ್ರಕ್ರಿಯೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ. ಪಶುವೈದ್ಯಾಧಿಕಾರಿ, ಜೆಇ ಸೇರಿದಂತೆ ಹಲವು ಹುದ್ದೆಗಳ ಮೆರಿಟ್ ಪಟ್ಟಿಯಲ್ಲಿ ಪಾಸಾದ ಅಭ್ಯರ್ಥಿಗಳ ಖುದ್ದು ಸಂದರ್ಶನವನ್ನು ಸಿಸಿಟಿವಿ ಕಣ್ಗಾವಲು ಇಲ್ಲದ ಕಡೆ ನಡೆಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೇಳಿದರೆ ಜ್ಞಾನೇಂದ್ರ ಕುಮಾರ್, “ಸಿಸಿಟಿವಿ ವಿಚಾರ ನನಗೇನೂ ಗೊತ್ತಿಲ್ಲ, ಈ ಬಗ್ಗೆ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನೇ ಕೇಳಿ” ಎಂದು ಜಾರಿಕೊಂಡಿದ್ದಾರೆ ಎನ್ನಲಾಗಿದೆ.

Must Read

Skip to toolbar