ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ರಾಜಕೀಯದಲ್ಲಿ ಹೊಸ ಶಕೆಯೊಂದಕ್ಕೆ ನಾಂದಿ ಹಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಐತಿಹಾಸಿಕ ತ್ರಿಪಕ್ಷೀಯ ಶೃಂಗಸಭೆಯಲ್ಲಿ ಒಂದಾಗಿದ್ದಾರೆ. ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಕೊನೆಗಾಣಿಸುವುದು ಹಾಗೂ ಜಾಗತಿಕ ಶಾಂತಿ ಸ್ಥಾಪಿಸುವುದು ಈ ಮಹತ್ವದ ಸಭೆಯ ಪ್ರಮುಖ ಉದ್ದೇಶವಾಗಿದೆ.
ಹಳೆಯ ದಾರಿ ಬಿಟ್ಟು ಹೊಸ ಹೆಜ್ಜೆ: ಟ್ರಂಪ್
ಹಳೆಯ ರಾಜತಾಂತ್ರಿಕ ನಿಲುವುಗಳನ್ನು ಬದಿಗಿಟ್ಟು, ಸುರಕ್ಷಿತ ಜಗತ್ತನ್ನು ನಿರ್ಮಿಸಲು ನಾವೆಲ್ಲರೂ ಹೊಸ ಹಾದಿಯನ್ನು ತುಳಿಯುತ್ತಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು. “ನಾವೆಲ್ಲರೂ ಒಟ್ಟಾಗಿ ಭಿನ್ನವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಪ್ರಮುಖ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಎಲ್ಲರಿಗೂ ಉತ್ತಮ, ಸುರಕ್ಷಿತ ಭವಿಷ್ಯವನ್ನು ನಿರ್ಮಿಸಲು ಈ ಐತಿಹಾಸಿಕ ಸಭೆ ನಮಗೆ ಅವಕಾಶ ನೀಡಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಣ್ವಸ್ತ್ರ ನಿಯಂತ್ರಣ
ಜಗತ್ತಿನ ಮೂರು ಅತಿದೊಡ್ಡ ಪರಮಾಣು ಶಕ್ತಿಗಳಾಗಿರುವ ಅಮೆರಿಕ, ರಷ್ಯಾ ಮತ್ತು ಚೀನಾ, ಅಣ್ವಸ್ತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮತ್ತು ಅವುಗಳ ಬಳಕೆಯ ಅಪಾಯವನ್ನು ತಗ್ಗಿಸುವ ಕುರಿತು ಚರ್ಚಿಸಲು ಸೂಕ್ತ ಸ್ಥಾನದಲ್ಲಿವೆ ಎಂದು ಟ್ರಂಪ್ ಹೇಳಿದರು. “ಒಮ್ಮೆ ಅಣ್ವಸ್ತ್ರಗಳನ್ನು ಹೊಂದಿದ ಮೇಲೆ ಅವುಗಳನ್ನು ಬಿಟ್ಟುಕೊಡುವುದು ಯಾವುದೇ ದೇಶದ ನಾಯಕನಿಗೆ ತುಂಬಾ ಕಷ್ಟದ ಕೆಲಸ. ಆದರೂ ಈ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕಿದೆ. ಇದರ ಜೊತೆಗೆ, ಬೇರೆ ದೇಶಗಳು ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಡೆಯುವುದು ಅಷ್ಟೇ ಮುಖ್ಯ. ಇರಾನ್ಗೆ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಸಿಗಲು ನಾವು ಬಿಡುವುದಿಲ್ಲ,” ಎಂದು ಟ್ರಂಪ್ ಸ್ಪಷ್ಟಪಡಿಸಿದರು.
ಉಕ್ರೇನ್ ಯುದ್ಧ ನಿಲ್ಲಿಸುವತ್ತ ಸಕಾರಾತ್ಮಕ ಹೆಜ್ಜೆ
ಶೃಂಗಸಭೆಗೂ ಮುನ್ನ ತಾವು ಮತ್ತು ಪುಟಿನ್ ಉಕ್ರೇನ್ ಯುದ್ಧದ ಕುರಿತು ಸುದೀರ್ಘ ದ್ವಿಪಕ್ಷೀಯ ಮಾತುಕತೆ ನಡೆಸಿರುವುದಾಗಿ ಟ್ರಂಪ್ ಬಹಿರಂಗಪಡಿಸಿದರು. “ಯುದ್ಧ ನಿಲ್ಲಿಸಲು ಪುಟಿನ್ ಮತ್ತು ಇನ್ನೊಂದು ಬದಿಯವರೂ ಬಯಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ,” ಎಂದು ಟ್ರಂಪ್ ಆಶಾವಾದ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಇದಕ್ಕೆ ದನಿಗೂಡಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, “ಉಕ್ರೇನ್ ಸಂಘರ್ಷ ಸೇರಿದಂತೆ ಪ್ರಾದೇಶಿಕ ವಿವಾದಗಳನ್ನು ಬಗೆಹರಿಸುವಲ್ಲಿ ನಮ್ಮ ಮೂರು ದೇಶಗಳ ಹಿತಾಸಕ್ತಿಗಳು ಒಂದೇ ಆಗಿವೆ. ಪರಸ್ಪರ ಗೌರವ ಮತ್ತು ಸಮಾನತೆಯ ಆಧಾರದ ಮೇಲೆ ನಾವು ಪಾಲುದಾರರಾಗಿ ಕೆಲಸ ಮಾಡಿದರೆ, ಜಾಗತಿಕ ಆರ್ಥಿಕತೆ, ಆಹಾರ ಮತ್ತು ಇಂಧನ ಭದ್ರತೆಗೆ ದೊಡ್ಡ ಕೊಡುಗೆ ನೀಡಬಹುದು. ಅಲ್ಲದೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಅಪರಾಧಗಳನ್ನು ಮಟ್ಟಹಾಕಲು ನಾವು ಒಟ್ಟಾಗಿ ಶ್ರಮಿಸಬೇಕಿದೆ,” ಎಂದರು.
ಅಂತಾರಾಷ್ಟ್ರೀಯ ನ್ಯಾಯಾಲಯದ ವಿರುದ್ಧ ಟ್ರಂಪ್ ಕಿಡಿ
ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಟ್ರಂಪ್, ಅದನ್ನು “ನಿಯಂತ್ರಣ ತಪ್ಪಿದ ಜಾಗತಿಕ ಸಂಸ್ಥೆ” ಎಂದು ಕರೆದರು. “ತನ್ನ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿರುವ ಇಂತಹ ಸಂಸ್ಥೆಗಳಿಂದ ನಮ್ಮ ದೇಶಗಳ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ,” ಎಂದು ಟ್ರಂಪ್ ಕರೆ ನೀಡಿದರು.



