ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಇಂದು (ಶುಕ್ರವಾರ) ಮಾತೃವಿಯೋಗವಾಗಿದೆ. ಅವರ 91 ವರ್ಷದ ತಾಯಿ ಸಾವಿತ್ರಿ ದೇವಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಕಾರ್ಯಕ್ರಮದ ನಡುವೆಯೇ ಬಂದ ಆಘಾತಕಾರಿ ಸುದ್ದಿ
ತಮ್ಮ ತಾಯಿಯ ನಿಧನದ ಸುದ್ದಿ ತಿಳಿದಾಗ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ತಾಯಿಯ ಅಗಲಿಕೆಯ ನೋವಿನ ನಡುವೆಯೂ, ದಿನದ ಪೂರ್ವನಿಗದಿತ ಎರಡು ಅಧಿಕೃತ ಕಾರ್ಯಕ್ರಮಗಳನ್ನು ಪೂರೈಸಲು ಅವರು ನಿರ್ಧರಿಸಿದ್ದಾರೆ. ಶನಿವಾರ ಪಂಚೂರ್ ಗ್ರಾಮದ ಸಮೀಪದ ‘ಫೂಲ್ ಚಟ್ಟಿ ಘಾಟ್’ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದ್ದು, 2020ರಲ್ಲಿ ಯೋಗಿ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಅವರ ಅಂತ್ಯಕ್ರಿಯೆಯೂ ಇದೇ ಘಾಟ್‌ನಲ್ಲಿ ನಡೆದಿತ್ತು.
ಇದನ್ನೂ ಓದಿ:
ಗಣ್ಯರ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು X ಮೂಲಕ ಸಂತಾಪ ಸೂಚಿಸಿದ್ದು, “ತಾಯಿಯನ್ನು ಕಳೆದುಕೊಳ್ಳುವುದು ಜೀವನದ ಅತ್ಯಂತ ಸಹಿಸಲಾಗದ ನೋವು” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಸೇರಿದಂತೆ ಹಲವು ಗಣ್ಯರು ಸಾವಿತ್ರಿ ದೇವಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.



