November 20, 2026
Friday, November 20, 2026
spot_img

ದೆಹಲಿಯಲ್ಲಿ ಎಸ್‌ಸಿಒ ಶೃಂಗಸಭೆ: ‘ಎಲ್ಲಾ ಸಂಬಂಧಗಳು ಸುಧಾರಿಸುತ್ತವೆ’ ಎಂದ ಪಾಕಿಸ್ತಾನ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಶಾಂಘೈ ಸಹಕಾರ ಸಂಘಟನೆಯ (SCO) ಚೊಚ್ಚಲ ‘ನಾಗರಿಕ ಸಂವಾದ ವೇದಿಕೆ’ ಸಮ್ಮೇಳನದಲ್ಲಿ ಭಾಗವಹಿಸಲು ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಸೂದ್ ಮಲಿಕ್ ದೆಹಲಿಗೆ ಬಂದಿಳಿದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂಬುದು ವಿಶೇಷ.

“ಎಲ್ಲಾ ಸಂಬಂಧಗಳು ಸುಧಾರಿಸುವ ಭರವಸೆಯಿದೆ”

ದೆಹಲಿಯ ಐತಿಹಾಸಿಕ ಪುರಾಣ ಕಿಲ್ಲಾದಲ್ಲಿ ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ಈ ಮೂರು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಮಲಿಕ್, ಉಪಖಂಡದ ರಾಷ್ಟ್ರಗಳ ನಡುವಿನ ಬಾಂಧವ್ಯದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ. “ನಮ್ಮೆಲ್ಲರ ಸಂಬಂಧಗಳು ಖಂಡಿತವಾಗಿಯೂ ಸುಧಾರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಸದ್ಯ ಜಾಗತಿಕ ರಾಜಕೀಯ ವೇಗವಾಗಿ ಬದಲಾಗುತ್ತಿದೆ. ನಾವು ವಿಶಾಲ ದೃಷ್ಟಿಕೋನದಿಂದ ಎಲ್ಲಾ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳನ್ನು ನೋಡಬೇಕಿದೆ. ಈ ನಿಟ್ಟಿನಲ್ಲಿ ಇಂದಿನ ವೇದಿಕೆ ಒಂದು ಅದ್ಭುತ ಅವಕಾಶವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

ಗಡಿಯಾಚೆಗಿನ ಭಯೋತ್ಪಾದನೆ ಪ್ರಶ್ನೆಗೆ ಉತ್ತರವೇನು?

ಭಾರತ-ಪಾಕ್ ಸಂಬಂಧ ಸುಧಾರಣೆ ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯ ಕುರಿತು ಭಾರತಕ್ಕಿರುವ ಆತಂಕದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಕ್ ಸಚಿವರು, “ನಾಳೆ (ಶನಿವಾರ) ನಾನು ಸಮ್ಮೇಳನದಲ್ಲಿ ನನ್ನ ಅಧಿಕೃತ ಹೇಳಿಕೆ ನೀಡಿದ ನಂತರ ಈ ಬಗ್ಗೆ ನಾವು ಸಾಕಷ್ಟು ಚರ್ಚಿಸೋಣ” ಎಂದು ಜಾಣ್ಮೆಯ ಉತ್ತರ ನೀಡಿದರು.

ಇದನ್ನೂ ಓದಿ:

ಸಂಸ್ಕೃತಿ ಮತ್ತು ಇತಿಹಾಸಕ್ಕೆ ಗಡಿಗಳಿಲ್ಲ

ಭಾರತ, ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಮಧ್ಯ ಏಷ್ಯಾದ ದೇಶಗಳ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಂಟನ್ನು ಸ್ಮರಿಸಿದ ಮಲಿಕ್, “ಸಂವಾದ ಎನ್ನುವುದು ವಿಭಿನ್ನತೆಯ ಸಂಕೇತ. ಸಂಸ್ಕೃತಿ ಮತ್ತು ನಾಗರಿಕತೆಗಳಿಗೆ ಯಾವುದೇ ಗಡಿಗಳಿರುವುದಿಲ್ಲ. ನಮ್ಮ ಹಂಚಿಕೆಯ ಇತಿಹಾಸ, ಭೂಗೋಳ ಮತ್ತು ಸಂಸ್ಕೃತಿಯ ಬಗ್ಗೆ ಇಲ್ಲಿ ಕುಳಿತು ಮಾತನಾಡುತ್ತಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ” ಎಂದು ಸಂತಸ ವ್ಯಕ್ತಪಡಿಸಿದರು.

ಶುಕ್ರವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಲಿಕ್ ಅವರನ್ನು ಪಾಕಿಸ್ತಾನ ಹೈಕಮಿಷನ್ ಅಧಿಕಾರಿ ಸಾದ್ ವಾರೈಚ್ ಬರಮಾಡಿಕೊಂಡರು. ಅಕ್ಟೋಬರ್ 20ರಂದು ತಜಕಿಸ್ತಾನದ ದುಶಾನ್ಬೆಯಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ವಿನಿಮಯ ಮತ್ತು ಜನರ ನಡುವಿನ ಬಾಂಧವ್ಯ ವೃದ್ಧಿಸಲು ಭಾರತ ಈ ಚೊಚ್ಚಲ ಸಮ್ಮೇಳನವನ್ನು ಆಯೋಜಿಸಲಿದೆ ಎಂದು ಘೋಷಿಸಿದ್ದರು.

Must Read

Skip to toolbar