ಹೊಸದಿಗಂತ ವರದಿ ಕಲಘಟಗಿ:
ಖಾಸಗಿ ವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಿಂಗಾಯತ ಧರ್ಮಗುರು ವಿಶ್ವಗುರು ಬಸವಣ್ಣನವರು ಹಾಗೂ ವಚನ ಸಾಹಿತ್ಯದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಎಫ್.ಐ.ಆರ್ ದಾಖಲಿಸಿ ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಕುರಿತು ತಹಶೀಲ್ದಾರ್ ಹಾಗೂ ಸಿಪಿಐ ಅವರಿಗೆ ಮನವಿ ನೀಡಲಾಯಿತು.
ತಾಲೂಕಿನ ಹಿರೆಹೊನ್ನಿಹಳ್ಳಿ ಗ್ರಾಮದ ಶರಣರ ಬಳಗ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಪಟ್ಟಣ, ವಿವಿಧ ಗ್ರಾಮಗಳ ಶರಣರು, ಬಸವ ಭಕ್ತರು ಪಟ್ಟಣದ ಎಪಿಎಂಸಿ ಇಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಲೇಖಕ ರವಿ ಹಂಜ ಹಾಗೂ ಪುಸ್ತಕ ಪ್ರಕಟಿಸಿದ ವಿಶ್ವೇಶ್ವರ ಭಟ್ ವಿರುದ್ಧ ಘೋಷಣೆ ಕೂಗಿದರು.
ಮನವಿಯಲ್ಲಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಹಾಗೂ ಸಮಸ್ತ ಲಿಂಗಾಯತರ ಆರಾಧ್ಯ ದೈವರಾದ ವಿಶ್ವಗುರು ಬಸವಣ್ಣನವರ ಕುರಿತು ಅನಿವಾಸಿ ಭಾರತೀಯನಾದ ರವಿ ಹಂಜಗಿಮಠ ಎಂಬ ವ್ಯಕ್ತಿಯು ಅತ್ಯಂತ ಕೀಳುಮಟ್ಟದ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿ ಅಪಮಾನಿಸಿರುತ್ತಾನೆ, ಆರೋಪಿಗಳಾದ ರವಿ ಹಂಜಗಿಮಠ ಹಾಗೂ ವಿಶ್ವವಾಣಿ ಟಿ.ವಿ. ವಾಹಿನಿಯ ಸಂಪಾದಕರ ಈ ಕೃತ್ಯಗಳಿಂದ ನಾಡಿನ ಸಮಸ್ತ ಬಸವಾಭಿಮಾನಿಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದ್ದು, ಮಾನಸಿಕ ನೋವು ಮತ್ತು ಆಘಾತ ಉಂಟಾಗಿದೆ. ಇವರು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ದ್ವೇಷ ಹರಡಿ, ಶಾಂತಿ-ಸೌಹಾರ್ದತೆ ಮತ್ತು ಸಾರ್ವಜನಿಕ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಭಾರತೀಯ & ಬಿ ಎನ್ ಎಸ್ 299, 353, 356,-1(4) ಕಾಯ್ದೆ ಐ ಟಿ ಸೆಕ್ಷನ್ 75 ರ ಅಡಿಯಲ್ಲಿ ತಕ್ಷಣವೇ ಎಫ್.ಐ.ಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಸಮಾಜದ ಶಾಂತಿ ಕದಡುವ ‘ಬಸವ ಮಂಟಪ’ ಪುಸ್ತಕವನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡು ನಿಷೇಧಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ:
ಈ ಸಂದರ್ಭದಲ್ಲಿ ನೀಲಪ್ಪ ಹಿರೇಗುಂಜಾಳ, ಅಶೋಕ್ ಶೀಲವಂತರ, ನೀಲಪ್ಪ ಮುತ್ತಗಿ, ರಾಮಣ್ಣ ಕೋಟಿ, ಬಸವರಾಜ ದಾಸನಕೊಪ್ಪ, ರಾಜಶೇಖರ ಶೀಲವಂತರ, ಗಿರೀಶ ಮುಕ್ಕಲ್ಲ, ತಿಪ್ಪಣ್ಣ ಕುರುಗುಂದ, ಗುರು ಕಂಪ್ಲಿ, ಸಹದೇವ ಉಳ್ಳಾಗಡ್ಡಿ, ಶಂಕರ ದಾಸನಕೊಪ್ಪ, ಶಿವರುದ್ರ ಧನಿಗೊಂಡ, ಬಸವರಾಜ ಮಾದೀ, ಚನ್ನಬಸು ಶಿಗಟ್ಟಿ , ಶಂಕ್ರಪ್ಪ ಗಬ್ಬೂರು, ಶಿವಲಿಂಗ ಮೂಗನ್ನವರ, ಬಸವರಾಜ ಯಲಿವಾಳ, ರಾಮಣ್ಣ ಬಡಿಗೇರ, ನಿಂಗಪ್ಪ ಬೆಳ್ಳಿವಲಿ, ಸಹದೇವಪ್ಪ ಧನಿಗೊಂಡ, ಬಸಪ್ಪ ಕೆಲಗೇರಿ ಸೇರಿದಂತೆ ಹಿರೆಹೊನ್ನಿಹಳ್ಳಿ ಅನುಭವ ಮಂಟಪ ಶರಣರ ಬಳಗ, ಶರಣ ಸಾಹಿತ್ಯ ಪರಿಷತ್ತು, ಕಲಘಟಗಿ ತಾಲೂಕಿನ ಎಲ್ಲ ಗ್ರಾಮಗಳ ಶರಣರು ಬಸವಾಭಿಮಾನಿಗಳು ಇದ್ದರು.



