November 21, 2026
Saturday, November 21, 2026
spot_img

ಗರ್ಭಕಂಠ ಕ್ಯಾನ್ಸರ್​ ತಡೆಯುವ ಹೆಚ್​ಪಿವಿ ಲಸಿಕೆ ಅಭಿಯಾನ : 9 ತಿಂಗಳಲ್ಲಿ 1 ಕೋಟಿ ಲಸಿಕೆ ಸಾಧನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ದೇಶಾದ್ಯಂತ ಆರಂಭಿಸಿರುವ ರಾಷ್ಟ್ರೀಯ ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ ಲಸಿಕಾ ಅಭಿಯಾನದಡಿ ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1 ಕೋಟಿಗೂ ಅಧಿಕ ಡೋಸ್‌ಗಳನ್ನು ವಿತರಿಸಲಾಗಿದೆ. ಹದಿಹರೆಯದ ಬಾಲಕಿಯರನ್ನು HPV ಸೋಂಕಿನಿಂದ ರಕ್ಷಿಸುವ ಮೂಲಕ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಮಾಹಿತಿ ಹಂಚಿಕೊಂಡಿದ್ದಾರೆ. 2026ರ ಫೆಬ್ರವರಿ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ HPV ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅಲ್ಪಾವಧಿಯಲ್ಲೇ ಈ ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿರುವ HPV ಸೋಂಕಿನ ವಿರುದ್ಧ ಹದಿಹರೆಯದ ಬಾಲಕಿಯರಿಗೆ ರಕ್ಷಣೆ ಒದಗಿಸುವಲ್ಲಿ ಈ ಅಭಿಯಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.

ಅಭಿಯಾನದಡಿ ಬಿಹಾರ, ಮಧ್ಯಪ್ರದೇಶ, ಮಿಜೋರಾಂ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳು ಶೇ.100ರಷ್ಟು ಗುರಿ ಸಾಧಿಸಿವೆ. ಇನ್ನು 12 ರಾಜ್ಯಗಳು ಶೇ.80ಕ್ಕೂ ಅಧಿಕ ಪ್ರಗತಿ ದಾಖಲಿಸಿವೆ. ಈ ಸಾಧನೆಗೆ ಸಂಬಂಧಿಸಿದ ರಾಜ್ಯಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. 2026ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 14 ವರ್ಷ ಮೇಲ್ಪಟ್ಟ ಬಾಲಕಿಯರಿಗಾಗಿ ರಾಷ್ಟ್ರೀಯ HPV ಲಸಿಕಾ ಅಭಿಯಾನ ಆರಂಭಿಸಿದ್ದರು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪೋಷಕರ ಒಪ್ಪಿಗೆಯೊಂದಿಗೆ ಉಚಿತವಾಗಿ ಏಕ ಡೋಸ್‌ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಿಳೆಯರ ಭವಿಷ್ಯದ ಆರೋಗ್ಯವನ್ನು ರಕ್ಷಿಸುವುದು, HPV ಸೋಂಕಿನ ಹರಡುವಿಕೆ ಹಾಗೂ ಗರ್ಭಕಂಠದ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ದೇಶದ ಪ್ರತಿಯೊಬ್ಬ ಅರ್ಹ ಬಾಲಕಿಗೂ ಲಸಿಕೆ ತಲುಪಿಸುವ ಮೂಲಕ ಕ್ಯಾನ್ಸರ್‌ ತಡೆಗಟ್ಟುವ ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

Must Read