November 21, 2026
Saturday, November 21, 2026
spot_img

ಗ್ರೀಸ್‌ನಲ್ಲಿ ಅದ್ಧೂರಿ ಕಲ್ಯಾಣ, ಕಚೇರಿಯಲ್ಲಿ ಚಿನ್ನದ ಉಂಗುರದ ಸಂಭ್ರಮ: ಉದ್ಯೋಗಿಗಳ ಮನಗೆದ್ದ ನವದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಯುವ ಉದ್ಯಮಿ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲಕಿ ಕಾವ್ಯಾ ಮಾರನ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ತಮ್ಮ ಮದುವೆಯ ಸಂತಸವನ್ನು ಸನ್ ನೆಟ್‌ವರ್ಕ್ಸ್ ಸಂಸ್ಥೆಯ ಸಿಬ್ಬಂದಿಯೊಂದಿಗೆ ಹಂಚಿಕೊಂಡಿರುವ ಈ ನವದಂಪತಿ, ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿಯಾದ ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ಅವರ ವಿವಾಹವು ನವೆಂಬರ್ 11, 2026ರಂದು ಗ್ರೀಸ್‌ನಲ್ಲಿ ಅತ್ಯಂತ ವೈಭವದಿಂದ ನೆರವೇರಿತು. ಕೇವಲ ಕುಟುಂಬಸ್ಥರು ಮತ್ತು ಆಪ್ತರಿಗಷ್ಟೇ ಸೀಮಿತವಾಗಿದ್ದ ಈ ಖಾಸಗಿ ಸಮಾರಂಭದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಸಿನಿಮಾ ಮತ್ತು ರಾಜಕೀಯ ರಂಗದ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು.

ವಿವಾಹದ ಸಂಭ್ರಮವನ್ನು ತಮ್ಮ ಸಂಸ್ಥೆಯ ಏಳಿಗೆಗಾಗಿ ದುಡಿಯುವ ಪ್ರತಿಯೊಬ್ಬ ಉದ್ಯೋಗಿಯೊಂದಿಗೂ ಹಂಚಿಕೊಳ್ಳಲು ಕಾವ್ಯಾ ಮಾರನ್ ನಿರ್ಧರಿಸಿದ್ದಾರೆ. ಅದರಂತೆ, ಸನ್ ಗ್ರೂಪ್‌ನ ಸಿಬ್ಬಂದಿಗೆ ಆರತಕ್ಷತೆಯ ಆಮಂತ್ರಣ ಪತ್ರಿಕೆಯ ಜೊತೆಗೆ ವಿಶೇಷ ಸಿಹಿತಿಂಡಿಯ ಬಾಕ್ಸ್ ಹಾಗೂ ಒಂದು ಸುಂದರವಾದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲಾಗಿದೆ.

ಸನ್ ಗ್ರೂಪ್‌ನ ಉದ್ಯೋಗಿಯೊಬ್ಬರು ತಮಗೆ ಸಿಕ್ಕಿರುವ ಈ ವಿಶೇಷ ಉಡುಗೊರೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಭಾರಿ ವೈರಲ್ ಆಗುತ್ತಿದೆ. ಚಿನ್ನದ ಉಂಗುರವನ್ನು ತೋರಿಸುತ್ತಾ ತಮ್ಮ ಸಂತಸವನ್ನು ವ್ಯಕ್ತಪಡಿಸಿರುವ ಉದ್ಯೋಗಿ, ಕಂಪನಿಯ ಈ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಉದ್ಯೋಗಿಗಳಿಗಾಗಿ ಆಯಾ ಕಚೇರಿಗಳಲ್ಲಿಯೇ ಮದುವೆಯ ಭರ್ಜರಿ ಭೋಜನ ಕೂಟವನ್ನೂ ಸಹ ಆಯೋಜಿಸಲಾಗಿತ್ತು. ಒಟ್ಟಿನಲ್ಲಿ, ತಮ್ಮ ಜೀವನದ ವಿಶೇಷ ದಿನದಂದು ಸಿಬ್ಬಂದಿಗೆ ಚಿನ್ನದ ಉಡುಗೊರೆ ನೀಡಿದ ಕಾವ್ಯಾ ಮತ್ತು ಅನಿರುದ್ಧ್ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Must Read

Skip to toolbar