ಹೊಸದಿಗಂತ ವರದಿ ಹುಬ್ಬಳ್ಳಿ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 52 ಸಾವಿರ ಕೋಟಿ ಅನುದಾನದ ದುರ್ಬಳಕೆ, ರೈತರಿಗೆ ಬರ ಪರಿಹಾರ ಹಾಗೂ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ನ. 23 ರಿಂದ 25 ರ ವರೆಗೆ ರಾಜ್ಯಾದ್ಯಂತ ಜಿಲ್ಲೆ ಮತ್ತು ಮಂಡಲ ಮಟ್ಟದಲ್ಲಿ ಬಿಜೆಪಿ ವತಿಯಿಂದ ಮೂರು ದಿನಗಳ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದ್ದು, ಈಗ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಸಂಕಷ್ಟಕ್ಕೆ ದೂಡಿದೆ. ಮೂರುವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾನುವಾರಗಳಿಗೆ ತಿನ್ನಲು ಮೇವು, ಕುಡಿಯಲು ನೀರು ಇಲ್ಲವಾಗಿದೆ ಎಂದು ಕಿಡಿಕಾರಿದರು.
ದುರ್ಬಳಕೆಯಾದ 52 ಸಾವಿರ ಕೋಟಿ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‌ಸಿಪಿ-ಟಿಎಸ್‌ಪಿ ಅನುದಾನದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 52 ಸಾವಿರ ಕೋಟಿಯನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಈ ಅನುದಾನವನ್ನು ಶಿಕ್ಷಣ, ಉದ್ಯೋಗ, ಭೂ ಒಡೆತನ, ನೀರಾವರಿ ಸೇರಿದಂತೆ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕಿತ್ತು. ದುರ್ಬಳಕೆಯಾದ ಅನುದಾನವನ್ನು ಸಂಬಂಧಿಸಿದ ಇಲಾಖೆ ಹಾಗೂ ನಿಗಮಗಳಿಗೆ ಮರಳಿಸಿ, ಮೂಲ ಉದ್ದೇಶಗಳಿಗೆ ಬಳಸಬೇಕು ಎಂದು ಆಗ್ರಹಿಸಿದರು. ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಪಕವಾಗಿ ವಾದ ಮಂಡಿಸುತ್ತಿಲ್ಲ. ಆದ್ದರಿಂದ ಮೀಸಲಾಯಿ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗಿದೆ ಎಂದು ದೂರಿದರು.
ಬಡವರ ಹೊಟ್ಟೆ ಮೇಲೆ ಹೊರೆ:
ಹಾಲಿನ ದರವನ್ನು ಪದೇಪದೆ ಹೆಚ್ಚಿಸಲಾಗಿದೆ. ವಿದ್ಯುತ್ ದರ, ಬಸ್ ಪ್ರಯಾಣ ದರ ಹಾಗೂ ವಿವಿಧ ಸೇವೆಗಳ ಶುಲ್ಕ ಏರಿಕೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಶೇ.42ರಷ್ಟು, ಬಿಎಂಟಿಸಿ ದರ ಶೇ.67ರಷ್ಟು ಹೆಚ್ಚಳವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಒಳರೋಗಿಗಳ ಶುಲ್ಕ, ರಕ್ತ ಪರೀಕ್ಷೆ ದರ, ಜನನ ಮತ್ತು ಮರಣ ಪ್ರಮಾಣಪತ್ರ ಶುಲ್ಕ ಸೇರಿದಂತೆ ಹಲವು ಸೇವೆಗಳ ದರ ಹೆಚ್ಚಿಸಿ ಬಡವರ ಮೇಲೆ ಹೊರೆ ಹಾಕಲಾಗಿದೆ ಎಂದು ಆರೋಪಿಸಿದರು. ನ.26ರಂದು ದೇಶಾದ್ಯಂತ ಸಂವಿಧಾನ ದಿನಾಚರಣೆ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಐದು ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕೇಂದ್ರ ಸರ್ಕಾರ ಗೌರವ ಸಲ್ಲಿಸಿದೆ. ಆದರೆ, ಕಾಂಗ್ರೆಸ್ ನಾಯಕರು ಸಂವಿಧಾನದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯ ಸರ್ಕಾರ ಪೆಟ್ರೋಲ್‌ನಲ್ಲಿ ಶೇ.30ರಷ್ಟು ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿಯೂ ಸತ್ಯಾಂಶವಿಲ್ಲ. ನಿಗದಿತ ಪ್ರಮಾಣದ ಮಿಶ್ರಣವನ್ನು ತೈಲ ಕಂಪನಿಗಳ ಹಂತದಲ್ಲಿಯೇ ಮಾಡಲಾಗುತ್ತದೆ. ಪೆಟ್ರೋಲ್ ಬಂಕ್‌ಗಳಲ್ಲಿ ಮಿಶ್ರಣ ಮಾಡುವ ಅವಕಾಶವಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪಾಲಿಕೆ ಮೇಯರ್ ದುರ್ಗಮ್ಮ ಬೇಜವಾಡ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ವಿಭಾಗ ಪ್ರಮುಖ ಜಯತೀರ್ಥ ಕಟ್ಟಿ ಮತ್ತಿತರರು ಇದ್ದರು.



