ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ನಿತ್ಯವೂ ಬಿಸಿಯೂಟ ನೀಡಲಾಗುತ್ತದೆ. ಆದರೆ ಊಟದಲ್ಲಿ ಕಲ್ಲು, ಹುಳಗಳು, ಮುಗ್ಗುಲು ವಾಸನೆಯಿರುವ ಅಕ್ಕಿ ಹೀಗೆ ನೂರಾರು ಸಮಸ್ಯೆಗಳು ಬರುತ್ತಿವೆ. ಈ ಕಾರಣದಿಂದಾಗಿ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಡಲು ಅಣಿಯಾಗಿದೆ.
ಮಕ್ಕಳಿಗೆ ಸರ್ಕಾರ ಊಟ ನೀಡುತ್ತಿದೆ. ಆದರೆ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನದ ಹಣ ಬಳಕೆ ಮಾಡಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ಅಥವಾ ಕಳಪೆ ಗುಣಮಟ್ಟದ ಆಹಾರ ನೀಡಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆಯೋ ಎನ್ನುವ ಬಗ್ಗೆ ಅರಿತುಕೊಳ್ಳಲು ಆಡಿಟ್ ವ್ಯವಸ್ಥೆ ರೂಪಿಸುವ ಚಿಂತನೆ ನಡೆಸಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಈ ಯೋಜನೆಯಲ್ಲಿ ಆಹಾರದ ಗುಣಮಟ್ಟ ಹಾಗೂ ವಿತರಣೆಯಲ್ಲಿ ಸಮಾನತೆ ಕಾಪಾಡಲು ಇಲಾಖೆ ಒತ್ತು ನೀಡುತ್ತಿದೆ.
ಸರ್ಕಾರಿ ಶಾಲೆಗಳ ಬಿಸಿಯೂಟಕ್ಕಾಗಿ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ 1,591 ಕೋಟಿ ರೂಪಾಯಿ ನೆರವು ದೊರೆತಿದೆ. ರಾಜ್ಯ ಸರ್ಕಾರವೂ ಸಾರ್ವಜನಿಕರ ತೆರಿಗೆ ಹಣವನ್ನು ಈ ಯೋಜನೆಗೆ ವೆಚ್ಚ ಮಾಡುತ್ತಿದೆ. ಹೀಗಾಗಿ ಮಕ್ಕಳಿಗೆ ವಿತರಿಸುವ ಆಹಾರದಲ್ಲಿ ನಿಗದಿತ ಗುಣಮಟ್ಟದ ಮಾನದಂಡ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ವಿಶೇಷ ಆಡಿಟ್ ನಡೆಸುವ ಬಗ್ಗೆ ಚರ್ಚೆ ನಡೆದಿದೆ. ಆಹಾರ ತಯಾರಿಕೆ, ವಿತರಣೆ, ಪೌಷ್ಟಿಕಾಂಶ, ಗುಣಮಟ್ಟದ ಬಗ್ಗೆ ನಿಗಾ ಇರಿಸಲಾಗುತ್ತಿದೆ.
ಮೆನ್ಯೂ ಬದಲಾವಣೆಗೆ ಚಿಂತನೆ
ಈಗಿರುವ ಮೆನ್ಯೂವನ್ನು ಬದಲಾಯಿಸಿ ಹೊಸ ಮೆನ್ಯು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಈಗ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ತರಕಾರಿ ಸಾಂಬಾರ್ ಅನ್ನ, ಶುಕ್ರವಾರ ಬಿಸಿಬೇಳೇಬಾತ್, ಶನಿವಾರ ಉಪ್ಪಿಟ್ಟು ನೀಡಲಾಗುತ್ತಿದೆ. ಇದರ ಜೊತೆಗೆ ಹಾಲು, ರಾಗಿ ಮಾಲ್ಟ್, ಮೊಟ್ಟೆ ನೀಡಲಾಗುತ್ತಿದೆ. ಈ ಮೆನ್ಯುವನ್ನು ಬದಲಾವಣೆ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡಲಾಗುತ್ತದೆ. ಆಯಾ ಜಿಲ್ಲೆಗಳ ಆಹಾರ ಪದ್ಧತಿಗೆ ಅನುಗುಣವಾಗಿ ರಾಗಿ ಮುದ್ದೆ, ಜೋಳದ ರೊಟ್ಟಿ, ಅಕ್ಕಿ ರೊಟ್ಟಿ ಹೀಗೆ ಪ್ರಾದೇಶಿಕ ಆಹಾರಗಳನ್ನು ಸೇರಿಸುವ ಬಗ್ಗೆ ಚಿಂತನೆ ನಡೆದಿದೆ.



