November 23, 2026
Monday, November 23, 2026
spot_img

ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ ಭವಿಷ್ಯದ ಪೀಳಿಗೆಗೂ ತಲುಪಬೇಕು: ನಟ ಮೋಹನ್‌ಲಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಭವಿಷ್ಯದ ಪೀಳಿಗೆಗೆ ರವಾನಿಸಬೇಕಾದ ಮೌಲ್ಯಗಳು ಮತ್ತು ಸಂಸ್ಕೃತಿ ಎಂದು ಮಲಯಾಳಂನ ಪ್ರಸಿದ್ಧ ನಟ ಮೋಹನ್‌ಲಾಲ್ ಒತ್ತಿಹೇಳಿದ್ದಾರೆ.

ಕೋಯಿಕ್ಕೋಡ್‌ನಲ್ಲಿ ಕೇರಳದ ಪ್ರಸಿದ್ಧ ವಾರಪತ್ರಿಕೆ ‘ಕೇಸರಿ’ ಪತ್ರಿಕೆಯ ಮಾತಂಗಿ ಮಲ್ಟಿಮೀಡಿಯಾ ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋಹನ್‌ಲಾಲ್ ಅವರು, ಯುವ ಪೀಳಿಗೆಯಲ್ಲಿ ರಾಷ್ಟ್ರೀಯ ಭಾವನೆ ಮತ್ತು ದೇಶಭಕ್ತಿಯ ಪ್ರಜ್ಞೆಯನ್ನು ತುಂಬಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು.

ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಕೇಂದ್ರವಾಗಿರಿಸಿಕೊಂಡು ನಿರ್ಮಿಸಲಾದ ಅನೇಕ ಚಲನಚಿತ್ರಗಳಲ್ಲಿ, ಅದರಲ್ಲೂ ದೇಶದ ಸುರಕ್ಷತೆ ಹಾಗೂ ಸಶಸ್ತ್ರ ಪಡೆಗಳನ್ನು ಆಧರಿಸಿದ ಸಿನಿಮಾಗಳಲ್ಲಿ ನಟಿಸುವ ಅವಕಾಶ ತಮಗೆ ದೊರೆತಿರುವುದನ್ನು ನೆನಪಿಸಿಕೊಂಡ ಅವರು, ಈ ಚಿತ್ರಗಳಲ್ಲಿ ತಮ್ಮ ಪಾತ್ರದ ಭಾಗವಾಗಿ ಸೇನಾ ಶಿಬಿರಗಳು ಮತ್ತು ಗಡಿ ಪ್ರದೇಶಗಳಿಗೆ ಭೇಟಿ ನೀಡಿದ ಅನುಭವಗಳನ್ನು ಮೆಲುಕು ಹಾಕಿದರು. ಪುಸ್ತಕಗಳ ಮೂಲಕ ಕಲಿತದ್ದಕ್ಕಿಂತ ಹೆಚ್ಚಾಗಿ ಇಂತಹ ಭೇಟಿಗಳಿಂದ ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆಯ ಮಹತ್ವವನ್ನು ಅರಿತುಕೊಂಡಿದ್ದಾಗಿ ಅವರು ಹೇಳಿದರು. ಈ ಮೂಲಕ ಇಂದಿನ ಶಿಕ್ಷಣದಲ್ಲಿ ದೇಶಭಕ್ತಿಯನ್ನು ಬೆಳೆಸುವ ಶಿಕ್ಷಣದ ಕೊರತೆಯಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

ಇದನ್ನೂ ಓದಿ:

ನಾವು ಇಂದು ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ನಮ್ಮ ಗಡಿಗಳನ್ನು ಸದಾ ಎಚ್ಚರಿಕೆಯಿಂದ ಕಾಯುತ್ತಿರುವ ಯೋಧರು ಕಾರಣ. ಈ ಯೋಧರ ಹೃದಯದಲ್ಲಿ ನಿಜವಾದ ದೇಶಭಕ್ತಿಯ ಭಾವನೆ ಇರುವುದನ್ನು ತಾವು ಅನೇಕ ಬಾರಿ ಗುರುತಿಸಿದ್ದೇನೆ ಎಂದು ಮೋಹನ್‌ಲಾಲ್ ಹೇಳಿದರು. ಅವರು ಈಗ ‘ಆಪರೇಷನ್ ಗಂಗಾ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ ದೇಶಭಕ್ತಿ ಕೇಂದ್ರಿತ ವಿಷಯವನ್ನೇ ಒಳಗೊಂಡಿದೆ. ಸಿನಿಮಾದ ಮೂಲಕ ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ತಾವು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಚಿತ್ರ ನಿರ್ಮಾಣದಲ್ಲಿ ಅತ್ಯಾಧುನಿಕ ತಾಂತ್ರಿಕ ಸುಧಾರಣೆಗಳಾಗಿರುವುದಕ್ಕೆ ಸಂತೋಷವಾಗಿದೆ. ಸಿಂಕ್ ಸೌಂಡ್‌ನಂತಹ ಆಧುನಿಕ ತಂತ್ರಜ್ಞಾನಗಳು ಸಿನಿಮಾಗಳಲ್ಲಿ ಮಹತ್ವದ ಪ್ರಗತಿ ಸಾಧಿಸಲು ನೆರವಾಗಿವೆ. ಇದೇ ರೀತಿ ಮಾಧ್ಯಮ ಕ್ಷೇತ್ರದಲ್ಲಿಯೂ ಡಿಜಿಟಲೀಕರಣ ಸೇರಿದಂತೆ ವ್ಯಾಪಕ ತಾಂತ್ರಿಕ ಸುಧಾರಣೆಗಳು ಆಗಿದ್ದು, ಇವುಗಳನ್ನು ಸದ್ಬಳಕೆ ಮಾಡುವ ಮೂಲಕ ಜನರಿಗೆ ರಾಷ್ಟ್ರಪ್ರೇಮದಂತಹ ಉತ್ತಮ ಸಂದೇಶಗಳು ತಲುಪುವಂತೆ ಮಾಡಬೇಕಾಗಿದೆ ಎಂದು ಹೇಳಿದರು. ಕೇಸರಿ ಪತ್ರಿಕೆ ಈ ನಿಟ್ಟಿನಲ್ಲಿ ಸಾಗುತ್ತಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Must Read