ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯ ವಿಮಾನ ಪ್ರಯಾಣವೊಂದು ಪ್ರಯಾಣಿಕರ ಪಾಲಿಗೆ ಅವಿಸ್ಮರಣೀಯ ಸಂಗೀತ ಸಂಜೆಯಾಗಿ ಬದಲಾದ ಅಪರೂಪದ ಘಟನೆ ರಾಯ್ಪುರ-ಮುಂಬೈ ಇಂಡಿಗೋ ವಿಮಾನದಲ್ಲಿ ನಡೆದಿದೆ. ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಸಹಪ್ರಯಾಣಿಕರ ಪ್ರೀತಿಗೆ ಮನಸೋತು, ವಿಮಾನದಲ್ಲೇ ಹಾಡುಗಳನ್ನು ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ.
ನವೆಂಬರ್ 20ರಂದು ರಾಯ್ಪುರದ ಏಮ್ಸ್ (AIIMS) ಸಂಸ್ಥೆಯ ‘ಒರಿಯಾನಾ ಫೆಸ್ಟ್’ ಕಾರ್ಯಕ್ರಮ ಮುಗಿಸಿ ಸೋನು ನಿಗಮ್ ಮುಂಬೈಗೆ ವಾಪಸಾಗುತ್ತಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ನೆಚ್ಚಿನ ಗಾಯಕನನ್ನು ಗುರುತಿಸಿ, ತಕ್ಷಣವೇ ಅವರ ಜನಪ್ರಿಯ ಗೀತೆಗಳಾದ ‘ಕಲ್ ಹೋ ನಾ ಹೋ’ ಮತ್ತು ‘ಮೈ ಅಗರ್ ಕಹೂಂ’ ಹಾಡಲು ಶುರುಮಾಡಿದರು. ಪ್ರಯಾಣಿಕರ ಈ ಅನಿರೀಕ್ಷಿತ ಪ್ರೀತಿ ಕಂಡು ಅಚ್ಚರಿಗೊಂಡ ಸೋನು ನಿಗಮ್, ತಮ್ಮ ಮೊಬೈಲ್ನಲ್ಲಿ ಆ ಸುಂದರ ಕ್ಷಣವನ್ನು ಸೆರೆಹಿಡಿದರು.
ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಹಾಡಿದ ಸೋನು
ಪ್ರಯಾಣಿಕರು ಕೇವಲ ತಾವು ಹಾಡುವುದಷ್ಟೇ ಅಲ್ಲದೆ, ಸೋನು ನಿಗಮ್ ಅವರ ಧ್ವನಿಯಲ್ಲೇ ಹಾಡು ಕೇಳಲು ಕಾತರರಾಗಿದ್ದರು. ಅಭಿಮಾನಿಗಳ ಉತ್ಸಾಹವನ್ನು ಕಂಡು ನಿರಾಸೆಗೊಳಿಸದ ಗಾಯಕ, ತಮ್ಮ ಆಸನದಿಂದ ಎದ್ದು ವಿಮಾನದ ಮಧ್ಯದ ಹಾದಿಯಲ್ಲಿ ನಿಂತು ಹಾಡಲು ಆರಂಭಿಸಿದರು.
‘ಕಿಸ್ಕಾ ಹೈ ತುಮ್ಕೋ ಇಂತಜಾರ್’, ‘ಮೈ ಹೂಂ ನಾ’, ‘ತುಝೆ ಲಗೇ ನಾ ನಜರಿಯಾ’ ಮತ್ತು ‘ಕಲ್ ಹೋ ನಾ ಹೋ’ ಗೀತೆಗಳನ್ನು ಹಾಡಿ ರಂಜಿಸಿದರು. ಪ್ರಯಾಣಿಕರ ಮತ್ತಷ್ಟು ಒತ್ತಾಯದ ಮೇರೆಗೆ ‘ಬಿಜುರಿಯಾ’ ಮತ್ತು ‘ಹರ್ ಘಡಿ ಬದಲ್ ರಹೀ ಹೈ ಜಿಂದಗಿ’ ಹಾಡುಗಳನ್ನೂ ಹಾಡುವ ಮೂಲಕ ವಿಮಾನದ ವಾತಾವರಣವನ್ನೇ ಸಂಗೀತಮಯವಾಗಿಸಿದರು.
ಇದನ್ನೂ ಓದಿ:
ಕನಸಿನಲ್ಲಿ ಮಾತ್ರ ಸಿಗುವಂತಹ ಪ್ರೀತಿ
ಈ ವಿಶೇಷ ಕ್ಷಣದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಗಾಯಕ ಸೋನು ನಿಗಮ್, ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. “ಕನಸಿನಲ್ಲಿ ಮಾತ್ರ ಸಿಗುವಂತಹ ಪ್ರೀತಿ ಇದು, ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.



