ಹೊಸದಿಗಂತ ವರದಿ ಚಿತ್ರದುರ್ಗ:
ಜನರ ಸಂಕಷ್ಟಗಳನ್ನು ನೇರವಾಗಿ ಹಂಚಿಕೊಂಡು, ಸತ್ಯ, ಶಿಸ್ತು, ನೀತಿ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದೇ ನಿಜವಾದ ಪ್ರಜಾಸೇವೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಿರಿಯೂರು ನಗರದ ನೆಹರು ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ’ಪ್ರಜಾಸೇವಾ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ನೋವು ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳಲು ಸುಮಾರು ಸಾವಿರಾರು ಜನರು ಇಲ್ಲಿಗೆ ಬಂದಿದ್ದಾರೆ. ಸಂಜೆಯವರೆಗೂ ಜನರ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದರು.
ನೀರಾವರಿ ಯೋಜನೆಗಳು
ಭದ್ರಾ ಮೇಲ್ದಂಡೆ ಯೋಜನೆಗೆ 1,742 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 244 ಕೋಟಿ ರೂ. ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ನಡೆದಿದೆ ಎಂದು ಹೇಳಿದರು. ನಾಲ್ಕು ಜಿಲ್ಲೆಗಳ 12 ತಾಲೂಕುಗಳಲ್ಲಿ 367 ಕೆರೆಗಳಿಗೆ ಭದ್ರಾ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳ ಯಶಸ್ಸು
ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ ಅಡಿಯಲ್ಲಿ 200 ಯೂನಿಟ್ವರೆಗೆ ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಅಥವಾ ಹಣ, ಹಾಗೂ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ನೆರವು ಜನರಿಗೆ ತಲುಪುತ್ತಿರುವುದನ್ನು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಫೋನ್ ನಂಬರ್ಗಳನ್ನು ಸರಿಯಾಗಿ ನೀಡಿ, ಅಕೌಂಟ್ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಭೂಮಿ ಹಕ್ಕು ಮತ್ತು ಪೋಡಿ ಅಭಿಯಾನ
ಬಡವರಿಗೆ ಸರ್ಕಾರದಿಂದ ಉಚಿತವಾಗಿ ಜಮೀನು ಕೊಡಿಸಿ, ಅದನ್ನು ಉಳುಮೆ ಮಾಡಲು ನೆರವಾಗುವ ಕಾರ್ಯಕ್ರಮ ತಂದಿರುವುದಾಗಿ ತಿಳಿಸಿದರು. ಜಮೀನಿನ ಪೋಡಿ ಮಾಡಿಸಿಕೊಡುವುದು, ’ಎ’ ಇಲ್ಲವೇ ’ಬಿ’ ಖಾತಾದಿಂದ ’ಎ’ ಖಾತೆಗೆ ಪರಿವರ್ತಿಸುವುದು, ದಾಖಲೆ ಕೊಟ್ಟು ಅಳತೆ ಮಾಡಿ ಫೋಡ್ ಹಾಕಿ ಉಚಿತವಾಗಿ ಭೂಮಿ ದಾಖಲೆ, ಆಸ್ತಿ, ಸೈಟ್ ಹಾಗೂ ಭೂಮಿಯನ್ನು ಒಂದೂ ರೂಪಾಯಿ ಲಂಚವಿಲ್ಲದೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:
30×40 ನಿವೇಶನ ಮತ್ತು ಮಹಿಳೆಯರ ಹೆಸರಿಗೆ ನೋಂದಣಿ
ಇನ್ನು ಮುಂದೆ 20×30ಸೈಟ್ಗಳ ಬದಲು ಎಲ್ಲಾ ಬಡವರಿಗೂ ಕನಿಷ್ಠ 30 ರಿಂದ 40 ಅಡಿಯ ನಿವೇಶನ ನೀಡಲು ಸಂಪುಟದಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು. ಅಲ್ಲದೆ, ಹೆಣ್ಣು ಮಕ್ಕಳು ಹಾಗೂ ತಾಯಂದಿರ ಹೆಸರಿಗೆ ಆಸ್ತಿ/ನಿವೇಶನ ನೋಂದಣಿ ಮಾಡುವ ಮೂಲಕ ಕುಟುಂಬಕ್ಕೆ ಆರ್ಥಿಕ ಭದ್ರತೆ ಮತ್ತು ರಕ್ಷಣೆ ನೀಡುವ ದೃಷ್ಟಿಕೋನವನ್ನು ಹಂಚಿಕೊಂಡರು.
ತೇಗದ ಸಸಿ ನೆಡುವ ಯೋಜನೆ
ರೈತರ ಜಮೀನಿನ ಮುಂದೆ ತೇಗದ ಸಸಿಗಳನ್ನು ನೀಡಲಾಗುವುದು. ಸ್ವಂತ ಜಾಗದಲ್ಲಿ ನೆಟ್ಟರೆ ಶೇ.100ರಷ್ಟು ಮತ್ತು ಸರ್ಕಾರಿ ಜಾಗ ಅಥವಾ ರಸ್ತೆ ಬದಿಯಲ್ಲಿ ನೆಟ್ಟರೆ ಶೇ.70 ರಷ್ಟು ಸಂಬಂಧಪಟ್ಟವರಿಗೆ ಹಾಗೂ ಶೇ. 30ರಷ್ಟು ಸರ್ಕಾರಕ್ಕೆ ಪಾಲು ಬರುವ ಮಾದರಿಯಲ್ಲಿ ಯೋಜನೆ ರೂಪಿಸಲಾಗಿದೆ. ಈ ಮರಗಳನ್ನು ರಕ್ಷಿಸಿ ಬೆಳೆಸಿದರೆ ಮುಂದಿನ ಸುಮಾರು 20 ವರ್ಷಗಳ ಅವಧಿಯಲ್ಲಿ ಮರದಿಂದ ಲಕ್ಷಾಂತರ ರೂಪಾಯಿ ಆದಾಯ ಪಡೆಯಲು ಸಾಧ್ಯವಾಗುತ್ತದೆ ಎಂದರು.



