November 21, 2026
Saturday, November 21, 2026
spot_img

ಚಳಿಗಾಲದ ಅಧಿವೇಶನಕ್ಕೆ ಅಧಿಕಾರಿಗಳ ಸಕಲ ಸಿದ್ಧತೆ: ವಸತಿ, ಊಟೋಪಹಾರ ವ್ಯವಸ್ಥೆಗೆ ಸೂಚನೆ

ಹೊಸದಿಗಂತ ವರದಿ ಬೆಳಗಾವಿ:

ಡಿಸೆಂಬರ್ 2ರಿಂದ 11ರವರೆಗೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹಾಗೂ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಸೂಚಿಸಿದರು.

ಸುವರ್ಣ ವಿಧಾನಸೌಧದಲ್ಲಿ ಶನಿವಾರ ನಡೆದ ಅಧಿವೇಶನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳಿಗೆ ಸೂಕ್ತ ವಸತಿ, ಊಟೋಪಹಾರ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಅಧಿವೇಶನ ಯಶಸ್ವಿಗೊಳಿಸಬೇಕು ಎಂದರು.

ಪಾಸ್ ವಿತರಣೆ ವ್ಯವಸ್ಥೆಯಲ್ಲಿ ಗೊಂದಲವಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಕಲಾಪ ವೀಕ್ಷಣೆಗೆ ಬರುವ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಸೂಕ್ತ ಸಮಯ ನಿಗದಿಪಡಿಸಬೇಕು. ಶಾಲಾ ಮಕ್ಕಳಿಗೆ ಯೋಗ ತರಬೇತಿ, ಪುಸ್ತಕ ಮೇಳ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಸಂವಾದ ಕಾರ್ಯಕ್ರಮ ಆಯೋಜಿಸುವಂತೆ ಸಭಾಧ್ಯಕ್ಷರು ಸೂಚಿಸಿದರು.

ಸಚಿವರು ಹಾಗೂ ಶಾಸಕರು ತಂಗುವ ಹೋಟೆಲ್ಗಳಲ್ಲಿ ವೈದ್ಯರ ತಂಡ ನಿಯೋಜಿಸಬೇಕು. ಸುವರ್ಣ ವಿಧಾನಸೌಧದಲ್ಲಿಯೂ ಆಂಬ್ಯುಲೆನ್ಸ್ ಸಹಿತ ವೈದ್ಯಕೀಯ ವ್ಯವಸ್ಥೆ ಸಿದ್ಧವಾಗಿರಬೇಕು. ಅಧಿವೇಶನ ಆರಂಭಕ್ಕೂ ಮುನ್ನ ಗಣಕಯಂತ್ರ, ಇಂಟರ್ನೆಟ್ ಹಾಗೂ ಧ್ವನಿ ವ್ಯವಸ್ಥೆ ಪರಿಶೀಲಿಸಿ, ಅಧಿಕಾರಿಗಳ ಸಂಪರ್ಕ ವಿವರಗಳ ಕೈಪಿಡಿಯನ್ನು ಶಾಸಕರ ಆಪ್ತ ಸಹಾಯಕರಿಗೆ ಒದಗಿಸಬೇಕು ಎಂದು ಸಭಾಪತಿ ತಿಳಿಸಿದರು.

ಇದನ್ನೂ ಓದಿ:

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಅಧಿವೇಶನದ ಯಶಸ್ವಿ ನಿರ್ವಹಣೆಗೆ 12 ಸಮಿತಿಗಳನ್ನು ರಚಿಸಲಾಗಿದ್ದು, ವಸತಿ, ಊಟೋಪಹಾರ, ಸಾರಿಗೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೂ ಮುನ್ನ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಸುವರ್ಣ ವಿಧಾನಸೌಧದ ಸಭಾಂಗಣ, ಮೊಗಸಾಲೆ, ಸೆಂಟ್ರಲ್ ಹಾಲ್ ಹಾಗೂ ವಾಚನಾಲಯ ಪರಿಶೀಲಿಸಿದರು.

Must Read

Skip to toolbar