ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿದ್ಯಾಲಯದ ಪದವೀಧರರಿಗಿಂತ ಹೆಚ್ಚಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ITI) ಕೌಶಲ್ಯ ತರಬೇತಿ ಪಡೆದ ಭಾರತೀಯ ಯುವಕರಿಗೆ ಇಂದು ಜಗತ್ತಿನಾದ್ಯಂತ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರ ಉತ್ತರ ಪ್ರದೇಶದ ಲಕ್ನೋದಲ್ಲಿ ಆಯೋಜಿಸಲಾಗಿದ್ದ 5ನೇ ‘ರಾಷ್ಟ್ರೀಯ ಕೌಶಲ್ ದೀಕ್ಷಾಂತ್ ಸಮಾರೋಹ’ (ಕೌಶಲ್ಯ ಘಟಿಕೋತ್ಸವ) ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ಮಹತ್ವವನ್ನು ಒತ್ತಿ ಹೇಳಿದರು.
ವಸಾಹತುಶಾಹಿ ಶಿಕ್ಷಣ ನೀತಿಯ ವಿರುದ್ಧ ವಾಗ್ದಾಳಿ
ಹಿಂದೆ ಭಾರತವು ಸುವರ್ಣಯುಗವನ್ನು ಕಾಣುತ್ತಿದ್ದಾಗ ವಿದೇಶಿ ಆಕ್ರಮಣಕಾರರು ಮೊದಲ ಪೆಟ್ಟು ನೀಡಿದ್ದೇ ನಮ್ಮ ಕರಕುಶಲತೆ ಮತ್ತು ಕೌಶಲ್ಯದ ಮೇಲೆ ಎಂದು ಮೋದಿ ಸ್ಮರಿಸಿದರು. “ನಂತರ ಬಂದ ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯನ್ನು ಹೇರುವ ಮೂಲಕ, ನಮ್ಮ ಕೌಶಲ್ಯಾಧಾರಿತ ವ್ಯವಸ್ಥೆಯನ್ನು ಕೇವಲ ಕಾಗದಪತ್ರಗಳನ್ನು ತಳ್ಳುವ ಗುಮಾಸ್ತರನ್ನು ಸೃಷ್ಟಿಸುವ ವ್ಯವಸ್ಥೆಯನ್ನಾಗಿ ಬದಲಾಯಿಸಿದರು. ತಮ್ಮ ಕೈಗಾರಿಕೆಗಳನ್ನು ಬೆಳೆಸಲು ಭಾರತದ ಕೌಶಲ್ಯವನ್ನು ನಾಶಪಡಿಸಿದರು” ಎಂದರು.
ಇಂದು ಸಮಾಜದಲ್ಲಿ ಮಕ್ಕಳು ಐಟಿಐ (ITI) ಸೇರಿದರೆ ಪೋಷಕರು ಅದನ್ನು ಸಂಬಂಧಿಕರಿಗೆ ಹೇಳಲು ಹಿಂಜರಿಯುವ ವಾತಾವರಣ ನಿರ್ಮಾಣವಾಗಿದೆ. ಕೈಯಿಂದ ಕೆಲಸ ಮಾಡುವವರನ್ನು ಕೀಳಾಗಿ ನೋಡುವ ಈ ಮನಸ್ಥಿತಿಯನ್ನು ಬದಲಾಯಿಸುವುದೇ ನನ್ನ ಸಂಕಲ್ಪ ಎಂದು ಪ್ರಧಾನಿ ತಿಳಿಸಿದರು.
ಅರಬ್ ರಾಷ್ಟ್ರಗಳ ನಿರ್ಮಾಣದಲ್ಲಿ ಭಾರತೀಯರ ಶ್ರಮ
ಕೌಶಲ್ಯ ಮತ್ತು ಕರಕುಶಲತೆ ಹೊಂದಿರುವವರಿಗೆ ಮುಂದೆ ಉತ್ತಮ ಭವಿಷ್ಯವಿದೆ ಎಂದ ಪ್ರಧಾನಿ, “ನಾನು ಸೌದಿ ಅರೇಬಿಯಾ, ದುಬೈ, ಅಬುಧಾಬಿ, ಕತಾರ್ ಅಥವಾ ಕುವೈತ್ಗೆ ಭೇಟಿ ನೀಡಿದಾಗಲೆಲ್ಲಾ ಅಲ್ಲಿನ ರಾಜಮನೆತನದವರು ಒಂದು ಮಾತನ್ನು ಹೇಳುತ್ತಾರೆ ‘ನಮ್ಮ ದೇಶದ ಭವ್ಯ ಆಧುನಿಕ ನಗರಗಳು ನಿರ್ಮಾಣವಾಗಿದ್ದು ನಮ್ಮ ಹಣದಿಂದಲ್ಲ, ಬದಲಾಗಿ ಭಾರತದ ಕುಶಲಕರ್ಮಿಗಳ ಕಠಿಣ ಪರಿಶ್ರಮದಿಂದ’ ಎಂದು. ಇಂದು ಇಡೀ ಜಗತ್ತು ಭಾರತದ ಐಟಿಐ ತರಬೇತಿ ಪಡೆದ ಯುವಕರನ್ನು ಎದುರು ನೋಡುತ್ತಿದೆ” ಎಂದು ಹೆಮ್ಮೆಯಿಂದ ನುಡಿದರು.
ಎಐ ಯುಗದಲ್ಲೂ ಕೌಶಲ್ಯವಂತರಿಗೆ ಅಪಾಯವಿಲ್ಲ
ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಎಲ್ಲರ ಕೆಲಸ ಕಸಿದುಕೊಳ್ಳುತ್ತದೆ ಎಂಬ ಆತಂಕವಿದೆ. ಆದರೆ, “ಯಾರ ಬಳಿ ನಿಜವಾದ ಕೌಶಲ್ಯವಿದೆಯೋ, ಅಂತಹವರ ಉದ್ಯೋಗವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ” ಎಂದು ಪ್ರಧಾನಿ ಯುವಜನತೆಗೆ ಭರವಸೆ ನೀಡಿದರು.



