November 22, 2026
Sunday, November 22, 2026
spot_img

900 ಕೋಟಿ ಗಡಿ ದಾಟಿದ ‘ರಾಮಾಯಣ’: ಆದರೂ ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ: ಭಾಗ 1’ ಬಾಕ್ಸ್ ಆಫೀಸ್‌ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಬಿಡುಗಡೆಯಾದ ಮೂರನೇ ಶನಿವಾರದಂದು ಈ ಚಿತ್ರವು ದೇಶಾದ್ಯಂತ ಸುಮಾರು 27 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಇದರಲ್ಲಿ ಹಿಂದಿ ಆವೃತ್ತಿಯೊಂದರಿಂದಲೇ ಸುಮಾರು 20 ಕೋಟಿ ರೂಪಾಯಿ ಹರಿದುಬಂದಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದ ಗಳಿಕೆಯಲ್ಲಿ ಶೇ. 80ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಈ ಮೂಲಕ ಚಿತ್ರದ ಒಟ್ಟು ದೇಶೀಯ ಗಳಿಕೆ 877 ಕೋಟಿ ರೂಪಾಯಿ ತಲುಪಿದ್ದು, ಇಂದೇ 900 ಕೋಟಿ ರೂಪಾಯಿಗಳ ಐತಿಹಾಸಿಕ ಮೈಲಿಗಲ್ಲನ್ನು ದಾಟುವ ಸನಿಹದಲ್ಲಿದೆ.

ಚಿತ್ರಕ್ಕೆ ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ರಾಮಾಯಣದಂತಹ ಕಥೆಗೆ ಅತಿ ದೊಡ್ಡ ಮಾರುಕಟ್ಟೆಯಾಗಬೇಕಿದ್ದ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಚಿತ್ರದ ಪ್ರದರ್ಶನ ಸಾಧಾರಣವಾಗಿದೆ. ಗಳಿಕೆಯ ಅಂಕಿಅಂಶಗಳು ಮೇಲ್ನೋಟಕ್ಕೆ ಭರ್ಜರಿಯಾಗಿ ಕಂಡರೂ, ಚಿತ್ರಮಂದಿರಕ್ಕೆ ಬರುತ್ತಿರುವ ಒಟ್ಟು ಪ್ರೇಕ್ಷಕರ ಸಂಖ್ಯೆ ತೀರಾ ಕಡಿಮೆಯಿದೆ. ಎರಡು ವಾರಗಳಲ್ಲಿ ಕೇವಲ 2 ಕೋಟಿಗೂ ಸ್ವಲ್ಪ ಹೆಚ್ಚು ಜನ ಮಾತ್ರ ಸಿನಿಮಾ ವೀಕ್ಷಿಸಿರುವುದು ಚಿತ್ರತಂಡಕ್ಕೆ ಕಳವಳಕಾರಿ ಸಂಗತಿಯಾಗಿದೆ.

ದಶಕಗಳಿಂದ ಭಾರತೀಯ ಪ್ರೇಕ್ಷಕರು ರಾಮಾಯಣವನ್ನು ಭಾವನಾತ್ಮಕ ಹಾಗೂ ಕೌಟುಂಬಿಕ ಮೌಲ್ಯಗಳ ಧಾರಾವಾಹಿಗಳ ಮೂಲಕ ನೋಡಿ ಬೆಳೆದಿದ್ದಾರೆ. ಆದರೆ ಈ ಸಿನಿಮಾ ಹಾಲಿವುಡ್ ಶೈಲಿಯ ತಾಂತ್ರಿಕ ವೈಭವಕ್ಕೆ ಹೆಚ್ಚು ಒತ್ತು ನೀಡಿರುವುದು ಸಾಮಾನ್ಯ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲು ವಿಫಲವಾಗಿದೆ. ಇದರ ಜೊತೆಗೆ, ಕಳೆದ ಒಂದು ವರ್ಷದಿಂದ ಚಿತ್ರದ ವಿರುದ್ಧ ನಡೆದ ಅನಗತ್ಯ ನಕಾರಾತ್ಮಕ ಪ್ರಚಾರಗಳು ಜನರ ಮೇಲೆ ಪ್ರಭಾವ ಬೀರಿವೆ. ಈ ಅಪಪ್ರಚಾರಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಚಿತ್ರತಂಡದ ಪ್ರಚಾರ ತಂತ್ರವು ವಿಫಲವಾಗಿದ್ದು, ಇಂತಹ ಬೃಹತ್ ಸಿನಿಮಾಗೆ ಬೇಕಾದ ಅಬ್ಬರ ಕಾಣಿಸಲಿಲ್ಲ.

ವ್ಯಾಪಾರದ ದೃಷ್ಟಿಯಿಂದ ‘ರಾಮಾಯಣ’ ಈಗಾಗಲೇ ಬ್ಲಾಕ್‌ಬಸ್ಟರ್ ಅಥವಾ ಸೂಪರ್ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಆದರೆ, ಈ ಚಿತ್ರಕ್ಕೆ ಹೂಡಿರುವ ಬೃಹತ್ ಬಂಡವಾಳ ಮತ್ತು ರಾಮಾಯಣದಂತಹ ಮಹಾಕಾವ್ಯಕ್ಕಿರುವ ತೂಕಕ್ಕೆ ಹೋಲಿಸಿದರೆ, ಈ ಯಶಸ್ಸು ಸಾಲದು. ತನ್ನ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಇತಿಹಾಸ ಸೃಷ್ಟಿಸುವಲ್ಲಿ ಚಿತ್ರ ಎಡವಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Must Read

Skip to toolbar