ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯ ಮಿತ್ರ ರಾಷ್ಟ್ರ ನೇಪಾಳದ ಪ್ರಧಾನಿ ಬಾಲೇಂದ್ರ ಶಾಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಪ್ರವಾಸವು, ಉಭಯ ದೇಶಗಳ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಕ್ಕೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.
ವಿಶೇಷವೆಂದರೆ, ಕಳೆದ ಮಾರ್ಚ್ನಲ್ಲಿ ನೇಪಾಳದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಾಲೇಂದ್ರ ಶಾ ಅವರು ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಇಂದು ನೇಪಾಳ ಏರ್ಲೈನ್ಸ್ ವಿಮಾನದ ಮೂಲಕ ದೆಹಲಿಗೆ ಬಂದಿಳಿಯಲಿರುವ ಅವರೊಂದಿಗೆ ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ, ವಿದೇಶಾಂಗ ಸಚಿವ ಶಿಶಿರ್ ಖಾನಲ್ ಸೇರಿದಂತೆ 34 ಜನರ ಉನ್ನತ ಮಟ್ಟದ ನಿಯೋಗವೂ ಆಗಮಿಸುತ್ತಿದೆ.
ನಾಳೆ ಪ್ರಧಾನಿ ಮೋದಿ ಜೊತೆ ಮಹತ್ವದ ಮಾತುಕತೆ
ಪ್ರವಾಸದ ಎರಡನೇ ದಿನವಾದ ನಾಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲೇಂದ್ರ ಶಾ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ವ್ಯಾಪಾರ, ಇಂಧನ, ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಲಿದ್ದಾರೆ. ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಲಿರುವ ಉಭಯ ನಾಯಕರು, ಪ್ರಧಾನಿ ಮೋದಿ ಆಯೋಜಿಸಿರುವ ವಿಶೇಷ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಬಾಲೇಂದ್ರ ಶಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿಯಾಗಲಿದ್ದಾರೆ.
ಇದನ್ನೂ ಓದಿ:
ಹಲವು ಒಪ್ಪಂದಗಳಿಗೆ ಸಹಿ
ಈ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ನೇಪಾಳದ ನಡುವೆ ಈಗಾಗಲೇ ಪೂರ್ಣಗೊಂಡಿರುವ ಹಲವು ಸಂಪರ್ಕ ಹಾಗೂ ಇಂಧನ ಯೋಜನೆಗಳನ್ನು ಉದ್ಘಾಟಿಸಲಾಗುವುದು ಮತ್ತು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದರೊಂದಿಗೆ ಶಿಕ್ಷಣ, ಆರೋಗ್ಯ, ಕೃಷಿ, ಕ್ರೀಡೆ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ. ನೇಪಾಳದಲ್ಲಿ ಭಾರತೀಯ ಉದ್ಯಮಿಗಳ ಹೂಡಿಕೆಯನ್ನು ಆಕರ್ಷಿಸಲು ‘ನೇಪಾಳ-ಭಾರತ ವ್ಯಾಪಾರ ವೇದಿಕೆ’ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಭಾರತದ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ ನೀತಿಯಡಿ ನೇಪಾಳದೊಂದಿಗಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.



