November 22, 2026
Sunday, November 22, 2026
spot_img

ಗುಜರಾತ್‌ನಲ್ಲಿ ಭೀಕರ ರಸ್ತೆ ಅಪಘಾತ: ಲಾರಿಗೆ ಡಿಕ್ಕಿ ಹೊಡೆದು 2 ತುಂಡಾದ ಕಾರು, 7 ಜನ ದುರ್ಮ*ರಣ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಾರಾಂತ್ಯದ ಪ್ರವಾಸಕ್ಕೆಂದು ತೆರಳಿ ಸಂತಸದಿಂದ ಮನೆಗೆ ಮರಳುತ್ತಿದ್ದ ಭಾರತೀಯ ಸೇನಾ ಸಿಬ್ಬಂದಿಯ ಕುಟುಂಬಗಳ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಗುಜರಾತ್‌ನ ಕಚ್ ಜಿಲ್ಲೆಯ ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ಹಸುಗೂಸುಗಳು ಸೇರಿದಂತೆ ಸೇನಾ ಕುಟುಂಬಗಳ ಏಳು ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಪ್ರವಾಸಿ ತಾಣ ‘ರನ್ ಆಫ್ ಕಚ್’ ವೀಕ್ಷಿಸಿ ಭುಜ್‌ಗೆ ವಾಪಸಾಗುತ್ತಿದ್ದಾಗ, ಇವರು ಪ್ರಯಾಣಿಸುತ್ತಿದ್ದ ಹ್ಯುಂಡೈ ಔರಾ ಕಾರು ಮತ್ತು ಬೃಹತ್ ಟ್ರೈಲರ್ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಕಚ್ ಪಶ್ಚಿಮ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ. ಡಿಕ್ಕಿಯ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡಾಗಿದ್ದು, ಕಾರಿನಲ್ಲಿದ್ದ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹೃದಯವಿದ್ರಾವಕ ದೃಶ್ಯ

ಅಪಘಾತದ ರಭಸಕ್ಕೆ ಮೃತದೇಹಗಳು ಛಿದ್ರಗೊಂಡು ರಸ್ತೆಯಲ್ಲೆಲ್ಲಾ ರಕ್ತದೋಕುಳಿ ಹರಿದಿತ್ತು. ನಜ್ಜುಗುಜ್ಜಾದ ಕಾರಿನ ಅವಶೇಷಗಳ ನಡುವೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಗಂಟೆಗಟ್ಟಲೆ ಹರಸಾಹಸ ಪಡಬೇಕಾಯಿತು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸುಂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಆಸ್ಪತ್ರೆಗೆ ತೆರಳಿ ಮುಂದಿನ ಪ್ರಕ್ರಿಯೆಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ:

ಮೃತರ ವಿವರ

ಮೃತಪಟ್ಟವರೆಲ್ಲರೂ ಮೂಲತಃ ಉತ್ತರಾಖಂಡದ ಗರ್ವಾಲ್ ಪ್ರದೇಶದವರಾಗಿದ್ದು, ಭುಜ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಯೋಧರ ಕುಟುಂಬ ಸದಸ್ಯರಾಗಿದ್ದಾರೆ. ಮೃತರನ್ನು ರಿಂಕಿ ನಿತಿನ್ ಗುಸೇನ್ (35), ಅವರ 4 ತಿಂಗಳ ಹಸುಗೂಸು ವಾಮಿಕಾ, ಸೌರಭ್ ಸಿಂಗ್ ನೇಗಿ (30), ಅವರ ಪತ್ನಿ ಸವಿತಾ ಸೌರಭ್ ಸಿಂಗ್ ನೇಗಿ (30), ಅವರ 3 ತಿಂಗಳ ಪುಟ್ಟ ಕಂದಮ್ಮ ಸಿವಿಕಾ, ರಾಜೇಶ್ ರಾವತ್ (35) ಹಾಗೂ ಅವರ 7 ವರ್ಷದ ಪುತ್ರಿ ರಕ್ಷಿತಾ ಎಂದು ಗುರುತಿಸಲಾಗಿದೆ.

ರಾಜಸ್ಥಾನದಲ್ಲೂ ಭೀಕರ ದುರಂತ

ಮತ್ತೊಂದೆಡೆ, ಶನಿವಾರ ತಡರಾತ್ರಿ ರಾಜಸ್ಥಾನದ ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿಯಲ್ಲೂ ಇಂತಹದ್ದೇ ಭೀಕರ ಅಪಘಾತ ಸಂಭವಿಸಿದೆ. ಖಾಟು ಶ್ಯಾಮ್ ದೇವಸ್ಥಾನದ ದರುಶನ ಮುಗಿಸಿ ಮಹಾರಾಷ್ಟ್ರಕ್ಕೆ ಮರಳುತ್ತಿದ್ದ ಒಂದೇ ಕುಟುಂಬದ 15 ಮಂದಿ ಪ್ರಯಾಣಿಸುತ್ತಿದ್ದ ‘ಫೋರ್ಸ್ ಕ್ರೂಸರ್’ ವಾಹನ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿರುವ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Must Read

Skip to toolbar