ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ ಖರೀದಿಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಸಲಹೆಯು ದೇಶದ ಲಕ್ಷಾಂತರ ಆಭರಣ ವ್ಯಾಪಾರಿಗಳು, ಸಣ್ಣ ವರ್ತಕರು ಮತ್ತು ಹೂಡಿಕೆದಾರರನ್ನು ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದೆ ಎಂದು ‘ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ’ (CTI) ಶ್ಲಾಘಿಸಿದೆ. ಈ ಕುರಿತು ಇಂದು ಪ್ರಧಾನಿ ಮೋದಿ ಅವರಿಗೆ ಕೃತಜ್ಞತಾ ಪತ್ರ ಬರೆದಿರುವ ವ್ಯಾಪಾರಿಗಳ ಒಕ್ಕೂಟ, ಅವರ ದೂರದೃಷ್ಟಿಯ ಮಾತುಗಳಿಗೆ ಧನ್ಯವಾದ ಅರ್ಪಿಸಿದೆ.
“ನಿಮ್ಮ ದೂರದೃಷ್ಟಿಯು ಲಕ್ಷಾಂತರ ಆಭರಣ ವ್ಯಾಪಾರಿಗಳು ಮತ್ತು ಹೂಡಿಕೆದಾರರನ್ನು ಸಾಲದ ಸುಳಿಗೆ ಸಿಲುಕದಂತೆ ಕಾಪಾಡಿದೆ” ಎಂಬ ಶೀರ್ಷಿಕೆಯಡಿ ಸಿಟಿಐ (CTI) ಈ ಪತ್ರವನ್ನು ಬರೆದಿದೆ. ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸದಂತೆ ಸಲಹೆ ನೀಡಿದ್ದಾಗ ಪ್ರತಿ ಕೆ.ಜಿ. ಚಿನ್ನದ ಬೆಲೆ 1.90 ಕೋಟಿ ಇತ್ತು. ಆದರೆ ಇದೀಗ ಚಿನ್ನದ ದರ ಕೆ.ಜಿ.ಗೆ 1.25 ಕೋಟಿಗೆ ಇಳಿಕೆಯಾಗಿದ್ದು, ಬರೋಬ್ಬರಿ 65 ಲಕ್ಷದಷ್ಟು ಕಡಿಮೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದಿವಾಳಿಯಾಗುವುದರಿಂದ ಬಚಾವಾದ ವ್ಯಾಪಾರಿಗಳು
ದೇಶಾದ್ಯಂತ ಲಕ್ಷಾಂತರ ಆಭರಣ ವ್ಯಾಪಾರಿಗಳು ಹಲವು ತಿಂಗಳುಗಳಿಗೆ ಆಗುವಷ್ಟು ಚಿನ್ನವನ್ನು ದಾಸ್ತಾನು ಇಟ್ಟುಕೊಳ್ಳುತ್ತಾರೆ. ಅಂದು ಪ್ರಧಾನಿಯವರ ಮಾತನ್ನು ನಿರ್ಲಕ್ಷಿಸಿ 1.90 ಕೋಟಿ ದರದಲ್ಲಿ ಚಿನ್ನ ಖರೀದಿಸಿದ್ದರೆ, ಇಂದು ಪ್ರತಿ ಕೆ.ಜಿ.ಗೆ 65 ಲಕ್ಷ ನಷ್ಟ ಅನುಭವಿಸಿ ಲಕ್ಷಾಂತರ ವ್ಯಾಪಾರಿಗಳು ಸಾಲಗಾರರಾಗಿ ದಿವಾಳಿಯಾಗಬೇಕಿತ್ತು ಎಂದು ಸಿಟಿಐ ತಿಳಿಸಿದೆ.
ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರು ಕೂಡ ಈ ಸಲಹೆಯಿಂದ ಸುರಕ್ಷಿತವಾಗಿದ್ದಾರೆ. “ಮೋದಿಜಿ ನಮ್ಮನ್ನು ಉಳಿಸಿದರು” ಎಂಬ ಸಂದೇಶಗಳು ಸಿಟಿಐ ಗ್ರೂಪ್‌ಗಳಲ್ಲಿ ನಿರಂತರವಾಗಿ ಹರಿದಾಡುತ್ತಿವೆ. ಅಂದು ಈ ಸಲಹೆಯನ್ನು ವಿರೋಧಿಸಿದ್ದ ವ್ಯಾಪಾರಿಗಳೂ ಇಂದು ಪ್ರಧಾನಿಯವರ ಮಾತು ಸರಿಯಾಗಿತ್ತು ಎಂದು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಹಾಗೂ ಇತರ ಪದಾಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೂ ನಿರಾಳ
ಪ್ರಸ್ತುತ ದೇಶದಲ್ಲಿ 52 ಲಕ್ಷ ಮದುವೆಗಳು ನಡೆಯುತ್ತಿದ್ದು, ಚಿನ್ನದ ಬೆಲೆ ಇಳಿಕೆಯಾಗಿರುವುದು ಸಾಮಾನ್ಯ ಕುಟುಂಬಗಳಿಗೂ ದೊಡ್ಡ ನೆಮ್ಮದಿ ತಂದಿದೆ. ಮುಂದೆಯೂ ಚಿನ್ನ ಮತ್ತು ಬೆಳ್ಳಿಯಂತಹ ಸೂಕ್ಷ್ಮ ಮಾರುಕಟ್ಟೆಗಳ ಬಗ್ಗೆ ಸಮಯೋಚಿತ ಮಾರ್ಗದರ್ಶನ ನೀಡಿ ವ್ಯಾಪಾರಿಗಳ ಬಂಡವಾಳವನ್ನು ರಕ್ಷಿಸುವಂತೆ ಸಿಟಿಐ ಮನವಿ ಮಾಡಿದೆ.
ಇದನ್ನೂ ಓದಿ:
ಲಕ್ನೋದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
ಇದಕ್ಕೂ ಒಂದು ದಿನ ಮುನ್ನ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿಸಬೇಡಿ ಎಂದು ತಾವು ಮಾಡಿದ್ದ ಮನವಿಯನ್ನು ಸ್ಮರಿಸಿದ್ದರು. “ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಒಂದು ಹೊತ್ತಿನ ಊಟ ಬಿಡುವಂತೆ ಕರೆ ನೀಡಿದಾಗ ದೇಶದ ಜನರು ಹೇಗೆ ಸ್ಪಂದಿಸಿದ್ದರೋ, ಅದೇ ರೀತಿ ನನ್ನ ಮಾತಿಗೆ ಬೆಲೆ ಕೊಟ್ಟು ಚಿನ್ನ ಖರೀದಿ ಕಡಿಮೆ ಮಾಡಿದರು. ಇದರಿಂದ ಚಿನ್ನದ ಬೆಲೆ ಇಳಿದು ಜನರ ಹಣ ಉಳಿತಾಯವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದರು.
ರಾಜಕೀಯ ಪ್ರತಿಕ್ರಿಯೆಗಳು
ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಉಳಿಸಲು 2026ರ ಮೇ 10ರಂದು ಸಿಕಂದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶವಾಸಿಗಳಿಗೆ 7 ಮನವಿಗಳನ್ನು ಮಾಡಿದ್ದರು. ಚಿನ್ನ ಖರೀದಿ ಕಡಿಮೆ ಮಾಡುವುದು, ವಿದೇಶ ಪ್ರವಾಸ ಮಿತಿಗೊಳಿಸುವುದು, ವರ್ಕ್ ಫ್ರಮ್ ಹೋಮ್ (WFH), ಇಂಧನ ಉಳಿತಾಯ, ಸ್ವದೇಶಿ ವಸ್ತುಗಳ ಬಳಕೆ, ಅಡುಗೆ ಎಣ್ಣೆ ಬಳಕೆ ತಗ್ಗಿಸುವುದು ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡುವುದು ಇದರಲ್ಲಿ ಸೇರಿತ್ತು. ಇದರ ಬೆನ್ನಲ್ಲೇ ಹಲವು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಬಿಜೆಪಿ ನಾಯಕರು ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿ ಎಲೆಕ್ಟ್ರಿಕ್ ವಾಹನ ಹಾಗೂ ಸಾರ್ವಜನಿಕ ಸಾರಿಗೆ ಬಳಸಲು ಮುಂದಾಗಿದ್ದರು. ಆದರೆ, ಸರ್ಕಾರ ತನ್ನ ಆರ್ಥಿಕ ಹೊರೆಯನ್ನು ಸಾಮಾನ್ಯ ಜನರ ಮೇಲೆ ಹಾಕುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್, ಪವನ್ ಖೇರಾ ಮತ್ತು ಕಾರ್ತಿ ಚಿದಂಬರಂ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಈ ಮನವಿಯನ್ನು ಟೀಕಿಸಿದ್ದರು.



