ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಸರ್ರೆಯಲ್ಲಿ ಭಾರತೀಯ ಮೂಲದ ಯುವ ದಂಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಸ್ಥಳೀಯ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ.
23 ವರ್ಷದ ಗಗನ್ಪ್ರೀತ್ (ಗ್ಯಾರಿ) ರೆಹಲ್ ಮತ್ತು 24 ವರ್ಷದ ಸುಖಜೀತ್ ಕೌರ್ ಮೃತಪಟ್ಟವರು. ಈ ಹತ್ಯೆ ಪೂರ್ವಯೋಜಿತವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಗುಂಡೇಟಿಗೆ ಬಲಿಯಾದ ದಂಪತಿ
ನವೆಂಬರ್ 15ರಂದು ರಾತ್ರಿ ಸುಮಾರು 10.38ಕ್ಕೆ ವಾಲ್ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಯುವಕ ಮತ್ತು ಯುವತಿಯನ್ನು ಪೊಲೀಸರು ಪತ್ತೆಹಚ್ಚಿದ್ದರು. ಸ್ಥಳಕ್ಕೆ ಬಂದ ತುರ್ತು ಚಿಕಿತ್ಸಾ ಸಿಬ್ಬಂದಿ ಇಬ್ಬರನ್ನೂ ಬದುಕಿಸಲು ಪ್ರಯತ್ನಿಸಿದ್ದು, ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ನೆರೆಯ ಡೆಲ್ಟಾ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:
ಟಾರ್ಗೆಟ್ ಕಿಲ್ಲಿಂಗ್ ಶಂಕೆ; ತನಿಖೆ IHITಗೆ
ಈ ಪ್ರಕರಣವನ್ನು ಕೆನಡಾದ ಪ್ರಮುಖ ಹತ್ಯೆ ಪ್ರಕರಣಗಳ ತನಿಖಾ ತಂಡವಾದ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ (IHIT) ಕೈಗೆತ್ತಿಕೊಂಡಿದೆ. ದಂಪತಿಯನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಗುಂಡಿನ ದಾಳಿಯ ಬಳಿಕ ಸುಮಾರು 13 ನಿಮಿಷಗಳಲ್ಲಿ ಸಮೀಪದಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗಿರುವ ವರದಿಯೂ ಲಭ್ಯವಾಗಿದ್ದು, ಸುಟ್ಟ ವಾಹನವೇ ದಾಳಿಕೋರರು ಬಳಸಿದ್ದ ಕಾರು ಇರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಅಪರಾಧ ಹಿನ್ನೆಲೆಯ ಬಗ್ಗೆಯೂ ಪರಿಶೀಲನೆ
ಗಗನ್ಪ್ರೀತ್ ರೆಹಲ್ ಈ ಹಿಂದೆ ಶಸ್ತ್ರಾಸ್ತ್ರ ಸಂಬಂಧಿತ ಪ್ರಕರಣಗಳಲ್ಲಿ ಪೊಲೀಸರ ಗಮನಕ್ಕೆ ಬಂದಿದ್ದ ಎನ್ನಲಾಗಿದೆ. ಆದರೆ ಸುಖಜೀತ್ ಕೌರ್ ಬಗ್ಗೆ ಕೆನಡಾದಲ್ಲಿ ಹೆಚ್ಚಿನ ಪೊಲೀಸ್ ದಾಖಲೆಗಳಿಲ್ಲ ಎಂದು ವರದಿಗಳು ತಿಳಿಸಿವೆ.



