November 22, 2026
Sunday, November 22, 2026
spot_img

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯವಾಗಲಿ; ಐಟಿ, ಬಿಟಿ ಕಂಪನಿಗಳಲ್ಲಿ ನಮ್ಮ ಯುವಕರಿಗೆ ಆದ್ಯತೆ ನೀಡಿ: ನಾರಾಯಣಗೌಡ

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯದಲ್ಲಿ ಹೆಚ್ಚುತ್ತಿರುವ ವಲಸಿಗರ ಸಂಖ್ಯೆಯಿಂದ ಕನ್ನಡಿಗರ ಉದ್ಯೋಗಾವಕಾಶಗಳಿಗೆ ಧಕ್ಕೆಯಾಗಬಾರದು. ಐಟಿ, ಬಿಟಿ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಉದ್ಯೋಗ ಮೀಸಲಾತಿ ಕಾಯ್ದೆ ರೂಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.

ಬೆಳಗಾವಿಯ ಜೀರಿಗೆ ಸಭಾಂಗಣದಲ್ಲಿ ಭಾನುವಾರ ಕರವೇ ಜಿಲ್ಲಾ ಘಟಕ ಆಯೋಜಿಸಿದ್ದ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರ ಉದ್ಯೋಗದ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕಾಗಿ ಉದ್ಯೋಗ ಕಾಯ್ದೆ ಜಾರಿಗೆ ತರಬೇಕು. ವಿಶ್ವ ಕನ್ನಡ ಸಮ್ಮೇಳನಕ್ಕೂ ಮುನ್ನ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾನೂನು ರೂಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದೇನೆ. ನಮ್ಮ ಯುವಕರಿಗೆ ಉದ್ಯೋಗ ದೊರೆತಾಗ ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜವಾದ ಅರ್ಥದಲ್ಲಿ ಸಾರ್ಥಕವಾಗುತ್ತವೆ ಎಂದು ಹೇಳಿದರು.

ಇದನ್ನೂ ಓದಿ:

ಬೆಳಗಾವಿಯಲ್ಲಿ ಒಂದು ಕಾಲದಲ್ಲಿ ಕನ್ನಡದ ಬಾವುಟ ಹಾರಿಸುವುದೇ ಸವಾಲಿನ ಕೆಲಸವಾಗಿತ್ತು. ಆದರೆ, ಇಂದು ನಗರದ ಗಲ್ಲಿಗಲ್ಲಿಗಳಲ್ಲಿ ಕನ್ನಡದ ಧ್ವಜ ಹಾರಾಡುತ್ತಿದೆ. ಕನ್ನಡಿಗರ ನಿರಂತರ ಹೋರಾಟದ ಫಲವಾಗಿ ಈ ಬದಲಾವಣೆ ಸಾಧ್ಯವಾಗಿದೆ. ಕನ್ನಡದ ನೆಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸಕ್ಕೆ ಮಠಾಧೀಶರು ಹಾಗೂ ಸಾಧು-ಸಂತರು ಬೆಂಬಲ ನೀಡುತ್ತಿರುವುದು ಶ್ಲಾಘನೀಯ ಎಂದು ನಾರಾಯಣಗೌಡ ಹೇಳಿದರು.

ಎಂಇಎಸ್‌ನ ಮತಬ್ಯಾಂಕ್ ರಾಜಕಾರಣದ ಕಾರಣದಿಂದ ಕನ್ನಡದ ಪರವಾಗಿ ಧ್ವನಿ ಎತ್ತಲು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಮಠಾಧೀಶರು ಕನ್ನಡದ ಪರವಾಗಿ ನಿಂತಿದ್ದು ಮಹತ್ವದ ಬೆಳವಣಿಗೆ ಎಂದು ಅವರು ಸ್ಮರಿಸಿದರು.

ನಾಲ್ಕು ದಶಕಗಳಿಂದ ಕರವೇ ಕನ್ನಡದ ಪರವಾಗಿ ಹೋರಾಟ ನಡೆಸುತ್ತಿದೆ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಹಿರಿಯರು ಮಾಡಿದ ತ್ಯಾಗ, ಬಲಿದಾನವನ್ನು ಮರೆಯಬಾರದು. ರಾಜ್ಯದ ಎಲ್ಲ ಭಾಗಗಳಲ್ಲೂ ಕೈಗಾರಿಕೆಗಳು ಹಾಗೂ ಉದ್ಯಮಗಳು ಸ್ಥಾಪನೆಯಾಗಿ ಸ್ಥಳೀಯ ಕನ್ನಡ ಯುವಕರಿಗೆ ಉದ್ಯೋಗ ದೊರೆಯಬೇಕು. ಬೆಳಗಾವಿಗೆ ಯಾವುದೇ ರೀತಿಯ ಕುತ್ತು ಬಂದರೂ ಇಡೀ ಕರ್ನಾಟಕ ಒಗ್ಗಟ್ಟಿನಿಂದ ನಿಲ್ಲಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರನ್ನು ಕರವೇ ವತಿಯಿಂದ ಸನ್ಮಾನಿಸಲಾಯಿತು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಉಪಮೇಯರ್ ಹನುಮಂತ ಕೊಂಗಾಲಿ, ಡಿಸಿಪಿ ನಾರಾಯಣ ಭರಮನಿ, ರಾಜಕುಮಾರ ಟೋಪಣ್ಣವರ ಸೇರಿದಂತೆ ಹಲವು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

Must Read

Skip to toolbar