ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸದ್ಯ ತಮ್ಮ ಬಹುನಿರೀಕ್ಷಿತ ‘ಮಾತೃಭೂಮಿ’ ಸಿನಿಮಾದ ಬಿಡುಗಡೆ ಹಾಗೂ ‘ಬಿಗ್ ಬಾಸ್ ಸೀಸನ್ 20’ರ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಸಲ್ಮಾನ್ ಅವರಲ್ಲಿ ಮೊದಲಿನ ಜೋಶ್ ಕಾಣಿಸುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಈ ಎಲ್ಲಾ ವಿಚಾರಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದು, ತಮ್ಮ ಸರಳ ಜೀವನದ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ಐದಾರು ಸಿನಿಮಾಗಳಲ್ಲಿ ತಮ್ಮ ಎನರ್ಜಿ ಕಡಿಮೆಯಾಗಿದೆ ಎಂಬ ಅಭಿಮಾನಿಗಳ ಮಾತನ್ನು ಸಲ್ಮಾನ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. “ನನ್ನ ತಂಡವೂ ಈ ಬಗ್ಗೆ ನನಗೆ ತಿಳಿಸಿದೆ. ಹಳೆಯ ಭಾಯ್ ಮತ್ತೆ ತೆರೆಯ ಮೇಲೆ ಅಬ್ಬರಿಸಬೇಕು ಎಂಬುದು ಅಭಿಮಾನಿಗಳ ಆಸೆ. ‘ಮಾತೃಭೂಮಿ’ ಟ್ರೇಲರ್ ನೋಡಿದ ಮೇಲೂ ಇದೇ ಮಾತು ಕೇಳಿಬರುತ್ತಿದೆ. ಆದರೆ ಮುಂದಿನ ಸಿನಿಮಾದಲ್ಲಿ ಖಂಡಿತವಾಗಿಯೂ ನನ್ನ ಹಳೆಯ ಖದರ್ ನೋಡಲಿದ್ದೀರಿ” ಎಂದು ಸಲ್ಮಾನ್ ನಗುತ್ತಲೇ ಭರವಸೆ ನೀಡಿದ್ದಾರೆ.
ತಮ್ಮ ಜೀವನದ ಆರಂಭಿಕ ದಿನಗಳ ಆಸೆಯನ್ನು ಹಂಚಿಕೊಂಡ ಸಲ್ಮಾನ್, “ಯೌವನದಲ್ಲಿ ನನಗೆ 10 ಲಕ್ಷ ರೂಪಾಯಿ ಸಂಪಾದಿಸುವ ಗುರಿಯಿತ್ತು. ಅದನ್ನು ಬ್ಯಾಂಕಿನಲ್ಲಿಟ್ಟು ಬರುವ 2,000 ರೂಪಾಯಿ ಬಡ್ಡಿಯಲ್ಲಿ ಸರಳವಾಗಿ ಬದುಕಬೇಕೆಂದುಕೊಂಡಿದ್ದೆ” ಎಂದಿದ್ದಾರೆ. ಇನ್ನು ತಮ್ಮ ಫಿಟ್‌ನೆಸ್ ಮತ್ತು ಆಹಾರ ಪದ್ಧತಿಯ ಬಗ್ಗೆ ಮಾತನಾಡುತ್ತಾ, “ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಒಂದು ದಿನಕ್ಕೆ ತಿನ್ನುವಷ್ಟು ಆಹಾರವನ್ನು ನಾನು ಒಂದು ವಾರಕ್ಕೆ ತಿನ್ನುತ್ತೇನೆ. ಕೇವಲ ಒಂದು ಚಮಚ ಅನ್ನ, ಸ್ವಲ್ಪ ತರಕಾರಿ ಅಥವಾ ಚಿಕನ್ ಮಾತ್ರ ನನ್ನ ಆಹಾರ” ಎಂದು ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಶರ್ಟ್ ಬಿಚ್ಚಿ ಟ್ರೋಲಿಗರಿಗೆ ಸಲ್ಮಾನ್ ತಿರುಗೇಟು ನೀಡಿದ್ದರು. “ಅದು ಆ ಕ್ಷಣದ ನಿರ್ಧಾರವಾಗಿತ್ತು. ಇಂದು ಒಳ್ಳೆಯ ವಿಚಾರಗಳಿಗಿಂತ ನೆಗೆಟಿವಿಟಿಯೇ ಹೆಚ್ಚು ಪ್ರಚಾರ ಪಡೆಯುತ್ತಿದೆ. ಕೇವಲ ಹಣ ಮತ್ತು ಫಾಲೋವರ್ಸ್‌ಗಾಗಿ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದು ಸರಿಯಲ್ಲ. ಒಳಗಿನಿಂದ ನೆಗೆಟಿವ್ ಇರುವವರು ಮಾತ್ರ ಹೀಗೆ ಮಾಡಲು ಸಾಧ್ಯ” ಎಂದು ಸಲ್ಮಾನ್ ಕಿಡಿಕಾರಿದ್ದಾರೆ.
ಅಪೂರ್ವ ಲಖಿಯಾ ನಿರ್ದೇಶನದ, ಚಿತ್ರಾಂಗದಾ ಸಿಂಗ್ ನಾಯಕಿಯಾಗಿ ನಟಿಸಿರುವ ‘ಮಾತೃಭೂಮಿ’ ಚಿತ್ರ ಡಿಸೆಂಬರ್ 4ರಂದು ತೆರೆಗೆ ಬರಲಿದೆ. ಯಾವುದೇ ಕಟ್ ಇಲ್ಲದೆ ಸೆನ್ಸಾರ್ ಮಂಡಳಿಯಿಂದ ‘ಯುಎ 16’ ಪ್ರಮಾಣಪತ್ರ ಪಡೆದಿರುವುದು ವಿಶೇಷ. ಟ್ರೇಲರ್‌ನಲ್ಲಿರುವ ವಿಎಫ್ಎಕ್ಸ್ ಬಗ್ಗೆ ಟೀಕೆಗಳು ಕೇಳಿಬಂದಿದ್ದರೂ, ತಾಂತ್ರಿಕ ಅಂಶಗಳಿಗಿಂತ ಸೈನಿಕರು ಮತ್ತು ಅವರ ಕುಟುಂಬದ ಭಾವನಾತ್ಮಕ ಕಥೆಗೆ ಹೆಚ್ಚು ಒತ್ತು ನೀಡಿ ಸಿನಿಮಾ ನೋಡಿ ಎಂದು ಸಲ್ಮಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.



