ಹೊಸದಿಗಂತ ವರದಿ ಬಾಗಲಕೋಟೆ:
“ರವಿ ಹಂಜಿ ಅವರು ಬರೆದಿರುವ ‘ಬಸವ ಮಂಟಪ’ ಕೃತಿಯಲ್ಲಿ ಜಗಜ್ಯೋತಿ ಬಸವಣ್ಣನವರಿಗೆ ಅವಹೇಳನ ಮಾಡಲಾಗಿದ್ದು, ಇದನ್ನು ಅಖಿಲ ಭಾರತ ವೀರಶೈವ ಮಹಾಸಭೆ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು, ಲೇಖಕರನ್ನು ಬಂಧಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ” ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಈ ಕೃತಿ ಬಿಡುಗಡೆಯಾಗಿ ತೀವ್ರ ವಿವಾದ ಸೃಷ್ಟಿಸಿದೆ. ಅಮೆರಿಕಾದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ ಲೇಖಕರನ್ನು ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ತಡೆದು ಬಂಧಿಸಿರುವ ಸರ್ಕಾರದ ಕ್ರಮ ಸರಿಯಾಗಿದೆ. ಬಸವಣ್ಣನವರ ಜೊತೆ ಒಡನಾಟವಿದ್ದಂತೆ ಕಲ್ಪಿಸಿಕೊಂಡು ಕೇವಲ ಪ್ರಚಾರಕ್ಕಾಗಿ ಇಂತಹ ಪುಸ್ತಕ ಬರೆಯುವುದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಲನಚಿತ್ರ ಮಾದರಿಯಲ್ಲಿ ಪುಸ್ತಕಗಳಿಗೆ ಸೆನ್ಸಾರ್ ಬರಲಿ:
“ಮಹಾತ್ಮರ ಬಗ್ಗೆ ಅನಗತ್ಯವಾಗಿ ಬರೆದು ವಿವಾದ ಹುಟ್ಟುಹಾಕುವ ಕೆಲಸ ನಿಲ್ಲಬೇಕು. ಕೃತಿಗಳನ್ನು ಪ್ರಕಟಿಸುವ ಮುನ್ನ ಅವುಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಚಲನಚಿತ್ರಗಳಿಗೆ ಇರುವಂತೆ ಪುಸ್ತಕಗಳಿಗೂ ಸೆನ್ಸಾರ್ ಮಂಡಳಿ ಜಾರಿಗೆ ತರಬೇಕು. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು, ಆದರೆ ವರಿಷ್ಠರ ನಿರ್ಣಯ ಬಂದ ಬಳಿಕ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದರು.
ಎಸ್ಐಟಿ ತನಿಖೆಗೆ ಒತ್ತಾಯ:
“ಕೇವಲ ಲೇಖಕರಷ್ಟೇ ಅಲ್ಲದೆ, ಈ ಕೃತಿಗೆ ವೇದಿಕೆ ಕಲ್ಪಿಸಿದವರು ಹಾಗೂ ಪ್ರಕಾಶಕರ ಮೇಲೂ ಸೂಕ್ತ ತನಿಖೆಯಾಗಬೇಕು. ಪುಸ್ತಕ ಬಿಡುಗಡೆಗೆ ಹೋದವರು ತಾವು ಪುಸ್ತಕ ಓದಿಲ್ಲ ಎಂದು ಈಗ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಹಿಂದೆ ವೀರಶೈವ-ಲಿಂಗಾಯತ ಬೇರೆ ಎಂದು ಜಾಮದಾರ ಅವರು ವಿವಾದ ಮಾಡಿದ್ದರು. ಈಗ ಏಕಾಏಕಿ ಆರ್ಎಸ್ಎಸ್ ಸಂಘ ಹಾಗೂ ದತ್ತಾತ್ರೇಯ ಹೊಸಬಾಳೆ ಅವರ ಹೆಸರನ್ನು ಎಳೆದು ತರಲಾಗಿದೆ. ವಿಚಾರಣೆ ವೇಳೆ ಸಂಘದ ಹೆಸರನ್ನು ಬಳಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಸವಣ್ಣನವರು ಕೇವಲ ರಾಜಕೀಯ ಲಾಭಕ್ಕೆ ಮಾತ್ರ ಬೇಕಾಗಿದ್ದಾರೆ, ಈಗ ಏಕೆ ಮಾತನಾಡುತ್ತಿಲ್ಲ? ಈ ಇಡೀ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗಲು ಸರ್ಕಾರ ಎಸ್ಐಟಿ (SIT) ತನಿಖೆಗೆ ಆದೇಶಿಸಬೇಕು” ಎಂದು ಚರಂತಿಮಠ ಆಗ್ರಹಿಸಿದರು.
ಕಾನೂನು ಕ್ರಮಕ್ಕೆ ಜಿ.ಎನ್. ಪಾಟೀಲ ಒತ್ತಾಯ:
ಮುಖಂಡ ಜಿ.ಎನ್. ಪಾಟೀಲ ಮಾತನಾಡಿ, “ರವಿ ಹಂಜಿ ಅವರು ‘ಬಸವ ಮಂಟಪ’ ಕೃತಿ ರಚಿಸುವ ಮೂಲಕ ಬಸವಣ್ಣನವರಿಗೆ ಅಪಮಾನ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸಿದ್ದಾರೆ. ಬಸವಣ್ಣನವರಿಗೆ ಕೋಟ್ಯಂತರ ಅಭಿಮಾನಿಗಳಿದ್ದು, ಇಂತಹ ಅವಮಾನವನ್ನು ಯಾರೂ ಸಹಿಸುವುದಿಲ್ಲ. ಸರ್ಕಾರ ತಕ್ಷಣವೇ ಪುಸ್ತಕವನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಂಡು, ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.



