November 23, 2026
Monday, November 23, 2026
spot_img

ಹನುಮನ ಪಾತ್ರಕ್ಕೆ ಸನ್ನಿ ಡಿಯೋಲ್ ಏಕೆ ಸೂಕ್ತ? ಆಯ್ಕೆಯ ರಹಸ್ಯ ಬಿಚ್ಚಿಟ್ಟ ‘ರಾಮಾಯಣ’ ನಿರ್ಮಾಪಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕೊನೆಯಲ್ಲಿ ಹನುಮಂತನ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಒಂದು ಸಣ್ಣ ಝಲಕ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಇದೀಗ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಹನುಮಂತನ ಪಾತ್ರವನ್ನು ಹಾಲಿವುಡ್‌ನ ‘ಐರನ್ ಮ್ಯಾನ್’ಗೆ ಹೋಲಿಸಿದ್ದು, ಈ ಪಾತ್ರಕ್ಕೆ ಸನ್ನಿ ಡಿಯೋಲ್ ಅವರನ್ನೇ ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಮಿತ್ ಮಲ್ಹೋತ್ರಾ, “ರಾಮಾಯಣದ ಅತ್ಯಂತ ಪ್ರೀತಿಪಾತ್ರಗಳಲ್ಲಿ ಹನುಮಂತ ಕೂಡ ಒಬ್ಬರು. ಅಭಿಮಾನಿಗಳ ನೆಚ್ಚಿನ ಪಾತ್ರವಾಗಿರುವುದರಿಂದ ಹನುಮಂತನನ್ನು ನಮ್ಮ ದೇಶದ ‘ಐರನ್ ಮ್ಯಾನ್’ ಎಂದು ಭಾವಿಸಿ. ಮೊದಲ ಭಾಗದಲ್ಲಿ ರಾಮ ಮುಂದೇನು ಮಾಡುತ್ತಾನೆ ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಹಾಗೆಯೇ ಉಳಿಸಿದ್ದೇವೆ. ಮುಂದಿನ ಭಾಗದಲ್ಲಿ ಹನುಮಂತನ ಆಗಮನದಿಂದ ಇಡೀ ಕಥೆಯ ರೋಚಕತೆ ಮತ್ತೊಂದು ಹಂತಕ್ಕೆ ಏರಲಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ.

ಹನುಮಂತನ ಪಾತ್ರಕ್ಕೆ ಸನ್ನಿ ಡಿಯೋಲ್ ಅವರನ್ನು ಆಯ್ಕೆ ಮಾಡಿದ ಬಗ್ಗೆ ವಿವರಿಸಿದ ನಮಿತ್, “ಹನುಮಂತನ ಪಾತ್ರಕ್ಕೆ ಮುಗ್ಧತೆ ಮತ್ತು ಎಲ್ಲರಿಗೂ ಇಷ್ಟವಾಗುವ ಗುಣದ ಜೊತೆಗೆ, ಕೋಪ ಬಂದಾಗ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವಂತಹ ಶಕ್ತಿ ಬೇಕಿತ್ತು. ದೇಶಾದ್ಯಂತ ಸನ್ನಿ ಡಿಯೋಲ್ ಅವರಿಗೂ ಅಂತಹದ್ದೇ ಇಮೇಜ್ ಇದೆ. ಅವರು ಈ ಹಿಂದೆ ಅನೇಕ ಸಿನಿಮಾಗಳಲ್ಲಿ ಮುಗ್ಧನಾಗಿ ಕಾಣಿಸಿಕೊಂಡು, ಕೋಪ ಬಂದಾಗ ಬೆಟ್ಟವನ್ನೇ ನಡುಗಿಸುವಂತಹ ಪಾತ್ರಗಳನ್ನು ಮಾಡಿದ್ದಾರೆ. ಯಾವುದೇ ಸೂಪರ್ ಹೀರೋ ಪಾತ್ರ ಮಾಡದಿದ್ದರೂ, ಜನ ಅವರನ್ನು ಭಾರತದ ಸೂಪರ್ ಹೀರೋ ಎಂದೇ ಆರಾಧಿಸುತ್ತಾರೆ. ಹೀಗಾಗಿ ಈ ಅಮರ ಪಾತ್ರಕ್ಕೆ ಸನ್ನಿ ಅವರೇ ನ್ಯಾಯ ಒದಗಿಸಬಲ್ಲರು ಎಂದು ನಂಬಿದೆವು” ಎಂದಿದ್ದಾರೆ.

ಮೊದಲ ಭಾಗದ ಕೊನೆಯಲ್ಲಿ ಸನ್ನಿ ಡಿಯೋಲ್ ಅವರ ಮುಖವನ್ನು ಪೂರ್ತಿಯಾಗಿ ತೋರಿಸದಿದ್ದರೂ, ಹಿನ್ನೆಲೆಯಲ್ಲಿ ದಿಲ್ಜಿತ್ ದೋಸಾಂಜ್ ಹಾಡಿರುವ ಹನುಮಾನ್ ಚಾಲೀಸಾ ಹಾಗೂ ಗದೆ ಹಿಡಿದು ‘ಜೈ ಶ್ರೀರಾಮ್’ ಎಂದು ಘೋಷಿಸುತ್ತಾ ಹಾರುವ ದೃಶ್ಯ ಮೈನವಿರೇಳಿಸುವಂತಿದೆ. ಈ ದೃಶ್ಯವು 2028ರಲ್ಲಿ ಬಿಡುಗಡೆಯಾಗಲಿರುವ ‘ರಾಮಾಯಣ’ದ ಎರಡನೇ ಭಾಗಕ್ಕೆ ಭರ್ಜರಿ ಮುನ್ನುಡಿ ಬರೆದಿದೆ. ಮುಂದಿನ ಭಾಗದಲ್ಲಿ ಸೀತಾಮಾತೆಯ ಹುಡುಕಾಟ ಮತ್ತು ರಾವಣನ ವಿರುದ್ಧದ ಮಹಾಯುದ್ಧದಲ್ಲಿ ಹನುಮಂತನ ಪಾತ್ರ ಅತ್ಯಂತ ನಿರ್ಣಾಯಕವಾಗಲಿದೆ.

Must Read

Skip to toolbar