ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀರ್ಘಕಾಲದ ಜೈಲು ವಾಸದ ನಡುವೆಯೇ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಗೋಧ್ರಾ ರೈಲು ದಹನ ಪ್ರಕರಣದ ಅಪರಾಧಿಯೊಬ್ಬನಿಗೆ ಸುಪ್ರೀಂ ಕೋರ್ಟ್ ವೈದ್ಯಕೀಯ ಕಾರಣಗಳಿಗಾಗಿ ತಾತ್ಕಾಲಿಕ ರಿಲೀಫ್ ನೀಡಿದೆ. ಹೃದಯ ಸಂಬಂಧಿ ಕಾಯಿಲೆ ಹಾಗೂ ಸುಮಾರು 18 ವರ್ಷಗಳ ಸೆರೆವಾಸವನ್ನು ಪರಿಗಣಿಸಿದ ನ್ಯಾಯಾಲಯ, ಇರ್ಫಾನ್ ಸಿರಾಜ್ ಪಡಾ ಎಂಬಾತನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದೆ.
2002ರ ಫೆಬ್ರವರಿ 27ರಂದು ನಡೆದ ಸಾಬರಮತಿ ಎಕ್ಸ್ಪ್ರೆಸ್ ರೈಲು ದಹನ ಪ್ರಕರಣದಲ್ಲಿ 58 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 2011ರಲ್ಲಿ ವಿಶೇಷ ನ್ಯಾಯಾಲಯ 31 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು. ಅವರಲ್ಲಿ ಇರ್ಫಾನ್ ಸಿರಾಜ್ ಪಡಾ ಕೂಡ ಒಬ್ಬರಾಗಿದ್ದು, 2002ರಲ್ಲಿ ಬಂಧನಕ್ಕೊಳಗಾಗಿದ್ದರು.
ಇದನ್ನೂ ಓದಿ:
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು ಸೋಮವಾರ ಪಡಾ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿತು. ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯಬೇಕಿರುವುದು ಹಾಗೂ 2018ರಿಂದ ತಮ್ಮ ಶಿಕ್ಷೆಯ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯ ಅಂತಿಮ ವಿಚಾರಣೆಗಾಗಿ ಕಾಯುತ್ತಾ ದೀರ್ಘಕಾಲ ಜೈಲಿನಲ್ಲಿ ಕಳೆದಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಪಡಾ ಪರ ವಕೀಲರು ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ಸಂಪೂರ್ಣವಾಗಿ ಆರೋಗ್ಯ ಮತ್ತು ಮಾನವೀಯ ಕಾರಣಗಳ ಆಧಾರದ ಮೇಲೆ ಮಂಡಿಸಿದ್ದು, ಶಿಕ್ಷೆಯ ವಿಚಾರದಲ್ಲಿ ಯಾವುದೇ ವಾದ ಮಂಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಗುಜರಾತ್ ಸರ್ಕಾರದ ಪರ ವಕೀಲ ಸ್ವಾತಿ ಘಿಲ್ಡಿಯಾಲ್ ಕೂಡ ವೈದ್ಯಕೀಯ ಕಾರಣಗಳಿಗಾಗಿ ಶಿಕ್ಷೆ ಅಮಾನತುಗೊಳಿಸುವುದಕ್ಕೆ ವಿರೋಧವಿಲ್ಲ ಎಂದು ತಿಳಿಸಿದರು.
ಬಿಲ್ಕಿಸ್ ಬಾನೋ ಪ್ರಕರಣದ ಬಳಿಕ ಮತ್ತೊಂದು ಮಹತ್ವದ ಆದೇಶ
ಇತ್ತೀಚೆಗೆ ಇದೇ ನ್ಯಾಯಪೀಠ ಬಿಲ್ಕಿಸ್ ಬಾನೋ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿತ್ತು. 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದ ಅವಧಿ ಹಾಗೂ ಅವರಲ್ಲಿ ಒಬ್ಬರ ಅಂಗವೈಕಲ್ಯವನ್ನು ನ್ಯಾಯಾಲಯ ಪರಿಗಣಿಸಿತ್ತು.



