ಹೊಸದಿಗಂತ ವರದಿ ಹಾವೇರಿ:
ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಹಾವೇರಿಯಲ್ಲಿ ರೈತರ ಆಕ್ರೋಶ ಸ್ಫೋಟಗೊಂಡಿದೆ. ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಸೋಮವಾರ ನಡೆದ ಸಭೆಯಲ್ಲೂ ಕಬ್ಬಿನ ದರದ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ಆಕ್ರೋಶಿತ ರೈತರು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಗೇಟ್ ಹಾರಿ ಒಳನುಗ್ಗಿದ ರೈತರು ತಮ್ಮ ಆಕ್ರೋಶ ಹೊರಹಾಕಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಗೆ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಆಗಮಿಸಿದ್ದರು. ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರೈತ ಮುಖಂಡ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಕಬ್ಬಿನ ದರ ನಿಗದಿ ಕುರಿತು ಚರ್ಚೆ ನಡೆಯಿತು. ರೈತರು ಪ್ರತಿ ಟನ್ ಕಬ್ಬಿಗೆ 3,600 ನೀಡಲೇಬೇಕು ಎಂದು ಪಟ್ಟು ಹಿಡಿದರು. ಆದರೆ, ಜಿಎಂ ಶುಗರ್ಸ್ ಪ್ರತಿ ಟನ್ಗೆ 3,000 ಹಾಗೂ ವಿಐಎನ್ಪಿ ಕಾರ್ಖಾನೆ 3,100 ಅಂತಿಮ ದರ ಎಂದು ಘೋಷಿಸಿದ್ದು, ಇದಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಮಾಲೀಕರು ಸ್ಪಷ್ಟಪಡಿಸಿದರು. ಇದರಿಂದ ರೈತರ ಬೇಡಿಕೆ ಮತ್ತು ಕಾರ್ಖಾನೆಗಳ ದರದ ನಡುವೆ ಒಮ್ಮತ ಮೂಡದೆ ಸಭೆ ಕಗ್ಗಂಟಾಯಿತು.
ಮಧ್ಯಾಹ್ನದಿಂದ ಸಂಜೆವರೆಗೂ ನಡೆದ ಸಭೆಯಲ್ಲಿ ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಜಮಾಯಿಸಿ ಪ್ರತಿಭಟನೆ ತೀವ್ರಗೊಳಿಸಿದರು. ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ ರೈತರು ಕಚೇರಿ ಮುಂಭಾಗದಲ್ಲಿ ಶಾಮಿಯಾನ ಅಳವಡಿಸಿದರು. ಪರಿಸ್ಥಿತಿ ಕೈಮೀರುವ ಆತಂಕದಿಂದ ಪೊಲೀಸರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದ ಗೇಟ್ಗೆ ಬೀಗ ಹಾಕಿ ಭದ್ರತೆ ಹೆಚ್ಚಿಸಿದರು. ಈ ವೇಳೆ ರೈತರು ಜಿಲ್ಲಾಧಿಕಾರಿ ಕಚೇರಿಯ ಬಾಗಿಲು ದೂಡಿ ಒಳನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಯಿತು.
ಇದನ್ನೂ ಓದಿ:
ಪೊಲೀಸರ ಕ್ರಮದಿಂದ ಮತ್ತಷ್ಟು ರೊಚ್ಚಿಗೆದ್ದ ರೈತರು ಜಿಲ್ಲಾಡಳಿತ ಭವನದ ಮುಂಭಾಗ ಹಾಗೂ ಹಿಂಭಾಗದ ಗೇಟ್ಗಳಿಗೆ ಅಡ್ಡಲಾಗಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ದಿಗ್ಬಂಧನ ಹಾಕಿದರು. ಯಾವುದೇ ಅಧಿಕಾರಿಗಳು ಕಚೇರಿಯಿಂದ ಹೊರಹೋಗದಂತೆ ಹಾಗೂ ಒಳಬರದಂತೆ ನಿರ್ಬಂಧ ಹೇರಿದರು. ಪರಿಣಾಮ, ರಾತ್ರಿಯಾದರೂ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಮನೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಕಬ್ಬಿನ ದರ ನಿಗದಿ ವಿಚಾರದಲ್ಲಿ ರೈತರು ಮತ್ತು ಕಾರ್ಖಾನೆಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಚಿವರ ಸಮ್ಮುಖದಲ್ಲಿಯೂ ಒಮ್ಮತ ಮೂಡದಿರುವುದು ರೈತರ ಅಸಮಾಧಾನ ಮತ್ತಷ್ಟು ಹೆಚ್ಚಿಸಿದೆ. ಸಮರ್ಪಕ ದರ ನಿಗದಿಯಾಗುವವರೆಗೂ ಜಿಲ್ಲಾಧಿಕಾರಿ ಕಚೇರಿಗೆ ಹಾಕಿರುವ ದಿಗ್ಬಂಧನ ತೆರವುಗೊಳಿಸುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿದ್ದು, ಜಗತ್ತಿನಲ್ಲೇ ಎಲ್ಲೂ ಇಲ್ಲದ ಸಕ್ಕರೆ ಲಾಭಿ ಹಾವೇರಿ ಜಿಲ್ಲೆಯಲ್ಲಿದೆ. ಇಲ್ಲಿ ಸಕ್ಕರೆ ಸಚಿವರಿಗೆ ಕಾರ್ಖಾನೆಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಜಿಲ್ಲೆಯ ಕಬ್ಬು ರೈತರಿಗೆ ಬೃಹತ್ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ. ಕಬ್ಬಿಗೆ ಸಮರ್ಪಕ ದರ ಘೋಷಣೆ ಆಗದ ಹೊರತು ಜಿಲ್ಲಾಡಳಿತಕ್ಕೆ ರೈತರ ದಿಗ್ಬಂಧನ ಮುಂದುವರಿಯಲಿದೆ. ಯಾರೂ ಹೊರಬರುವಂತೆಯೂ ಇಲ್ಲ, ಒಳಹೋಗುವಂತೆಯೂ ಇಲ್ಲ ಎಂದರು.



