ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಬೆಳಗಿನ ಜಾವ ಹಿಮಾಲಯದ ಗಡಿ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ನೇಪಾಳ ಸೇರಿದಂತೆ ಹಲವು ಪ್ರದೇಶಗಳ ಜನರಲ್ಲಿ ಆತಂಕ ಮೂಡಿಸಿದೆ. ನೇಪಾಳದ ಕೋಶಿ ಪ್ರಾಂತ್ಯದ ಲೆಲೆಪ್ ಸಮೀಪ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕಂಪನದ ಅಲೆಗಳು ಭಾರತ, ಭೂತಾನ್, ಬಾಂಗ್ಲಾದೇಶ ಮತ್ತು ಚೀನಾದ ಕೆಲವು ಭಾಗಗಳಿಗೂ ತಲುಪಿವೆ. ಬೆಳಗಿನ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಕಾರಣ ಜನರು ಮನೆಯಿಂದ ಹೊರಗೆ ಓಡಿ ಬಂದ ಘಟನೆಗಳು ನಡೆದಿವೆ. ಆದರೆ, ಈವರೆಗೆ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಬೆಳಗ್ಗೆ ಸುಮಾರು 7.02ಕ್ಕೆ ಭೂಕಂಪ ಸಂಭವಿಸಿದೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಭೂಮಿಯ ಒಳಗೆ ಸುಮಾರು 20 ಕಿಲೋಮೀಟರ್ ಆಳದಲ್ಲಿ ಇದರ ಕೇಂದ್ರಬಿಂದು ಪತ್ತೆಯಾಗಿದೆ ಮತ್ತು ತೀವ್ರತೆಯನ್ನು 5.3 ಎಂದು ದಾಖಲಿಸಲಾಗಿದೆ.
ಮತ್ತೊಂದೆಡೆ, ನೇಪಾಳದ ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರವು ತೀವ್ರತೆಯನ್ನು 5.6 ಎಂದು ಗುರುತಿಸಿದೆ. ನೇಪಾಳ-ಟಿಬೆಟ್ ಗಡಿಗೆ ಹತ್ತಿರವಿರುವ ತಾಪ್ಲೆಜಂಗ್ ಜಿಲ್ಲೆಯ ಓಲಾಂಗ್‌ಚುಂಗ್ ಗೋಲಾ ಪ್ರದೇಶವು ಕೇಂದ್ರಬಿಂದುವಾಗಿದೆ ಎಂದು ದಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ನೇಪಾಳದಲ್ಲಿ ಉಂಟಾದ ಭೂಕಂಪದ ಪರಿಣಾಮ ಭಾರತದ ಬಿಹಾರ, ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಕಂಡುಬಂದಿದೆ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾದರೂ, ಎಲ್ಲಿಯೂ ಗಂಭೀರ ಹಾನಿಯಾದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.



