ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದೋಹಾದಲ್ಲಿ ನಡೆದ ‘ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯ UAE ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ನ ಅತಿ ವೇಗದ ದ್ವಿಶತಕದ ವಿಶ್ವದಾಖಲೆಯನ್ನು ಬರೆದಿದ್ದಾರೆ.
28 ಸಿಕ್ಸರ್, 7 ಬೌಂಡರಿಗಳ ಅಬ್ಬರ
ಯುಎಇ ನಾಯಕ ಬಾಸಿಲ್ ಹಮೀದ್ ಎಸೆತವನ್ನು ಭರ್ಜರಿ ಸಿಕ್ಸರ್ಗೆ ಅಟ್ಟುವ ಮೂಲಕ ವೈಭವ್ ತಮ್ಮ ಐತಿಹಾಸಿಕ ದ್ವಿಶತಕವನ್ನು ಪೂರೈಸಿದರು. ದ್ವಿಶತಕ ಪೂರೈಸಿದ ಮರು ಎಸೆತದಲ್ಲೇ ವಿಕೆಟ್ ಒಪ್ಪಿಸಿದರೂ, ಅಷ್ಟರಲ್ಲೇ ಅವರು ಕೇವಲ 53 ಎಸೆತಗಳಲ್ಲಿ 28 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಚಚ್ಚಿದ್ದರು. 2024ರಲ್ಲಿ ನ್ಯೂಜಿಲೆಂಡ್ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಬಾರಿಸಿ ನಿರ್ಮಿಸಿದ್ದ ವಿಶ್ವದಾಖಲೆಯನ್ನು ವೈಭವ್ ಇದೀಗ ಅರ್ಧಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಪುಡಿ ಮಾಡಿದ್ದಾರೆ.
ಅತಿ ವೇಗದ ಶತಕದ ದಾಖಲೆಯೂ ವೈಭವ್ ಪಾಲು
ಇದೇ ಇನ್ನಿಂಗ್ಸ್ನಲ್ಲಿ ವೈಭವ್ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ನ ಅತಿ ವೇಗದ ಶತಕದ ದಾಖಲೆಯನ್ನೂ ಮುರಿದರು. ಈ ಮೂಲಕ 2023-24ರಲ್ಲಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ (29 ಎಸೆತ) ಹಾಗೂ 2015ರಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (31 ಎಸೆತ) ನಿರ್ಮಿಸಿದ್ದ ದಾಖಲೆಗಳನ್ನು ವೈಭವ್ ಹಿಂದಿಕ್ಕಿದ್ದಾರೆ.
ಇದನ್ನೂ ಓದಿ:
ಹರ್ಪ್ರೀತ್ ಭಾಟಿಯಾ ಶತಕ ವ್ಯರ್ಥ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಭಾರತ ‘ಎ’ ತಂಡದ ವೇಗಿಗಳಾದ ಹರ್ಷಿತ್ ರಾಣಾ ಮತ್ತು ಅರ್ಷದ್ ಖಾನ್ ದಾಳಿಗೆ ನಲುಗಿದ ಯುಎಇ ಕೇವಲ 20 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಭಾರತದ ಮಾಜಿ ದೇಶೀಯ ಆಟಗಾರ ಹರ್ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 130 ರನ್ ಪಡೆಯುವ ಮೂಲಕ ತಮ್ಮ ವೃತ್ತಿಜೀವನದ ಶ್ರೇಷ್ಠ ಲಿಸ್ಟ್-ಎ ಶತಕ ಸಿಡಿಸಿದರು. ಅವರಿಗೆ ಮುಹಮ್ಮದ್ ಶಹದಾದ್ (28) ಹಾಗೂ ಇಥಾನ್ ಡಿಸೋಜಾ (25) ಉತ್ತಮ ಸಾಥ್ ನೀಡಿದರು.
ಕೊನೆಯಲ್ಲಿ ನಾಯಕ ಬಾಸಿಲ್ ಹಮೀದ್ (ಅಜೇಯ 36) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಯುಎಇ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಭಾರತ ‘ಎ’ ಪರ ಅರ್ಷದ್ ಖಾನ್ 43 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಹರ್ಷ್ ದುಬೆ, ಶಹಬಾಜ್ ಅಹ್ಮದ್, ಸೂರ್ಯಾಂಶ್ ಶೆಡ್ಗೆ ಮತ್ತು ಹರ್ಷಿತ್ ರಾಣಾ ತಲಾ 1 ವಿಕೆಟ್ ಪಡೆದರು. ಆದರೆ, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಮುಂದೆ ಯುಎಇ ಬೌಲರ್ಗಳು ಅಕ್ಷರಶಃ ಅಸಹಾಯಕರಾದರು.



