ಹೊಸದಿಗಂತ ವರದಿ ಖಾನಾಪುರ:
ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಾರನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು, ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ.23 ರಂದು ಬೆಳಿಗ್ಗೆ 7.05ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ತನಿಖಾ ಠಾಣೆಯ ಮುಂಭಾಗದ ರಸ್ತೆಯಲ್ಲಿ ಅಬಕಾರಿ ಅಧಿಕಾರಿಗಳು ರಸ್ತೆಗಾವಲು ನಡೆಸುತ್ತಿದ್ದರು. ಈ ವೇಳೆ ಗೋವಾ ಕಡೆಯಿಂದ ಬಂದ ಕೆಎ-41/ಡಿ-0123 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರನ್ನು ತಪಾಸಣೆಗೊಳಪಡಿಸಿದಾಗ, ವಿವಿಧ ನಮೂನೆಯ ಗೋವಾ ರಾಜ್ಯದ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಕಾರಿನಲ್ಲಿ ಒಟ್ಟು 22.250 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಹೊಂದಿ ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ರಾಜು ಅಶೋಕ ಪೂಜಾರಿ (34) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿತನಿಗೆ ಬಿಎನ್ಎಸ್ಎಸ್ ಕಾಯ್ದೆ 2023ರ ಕಲಂ 35(3)ರ ಅಡಿಯಲ್ಲಿ ಮುಂದಿನ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ:
ಪ್ರಕರಣದಲ್ಲಿ ಜಪ್ತಿ ಮಾಡಲಾದ ಮದ್ಯದ ಮೌಲ್ಯ ₹21,050 ಹಾಗೂ ಕಾರಿನ ಮೌಲ್ಯ ₹3 ಲಕ್ಷ ಸೇರಿದಂತೆ ಒಟ್ಟು ₹3,21,050 ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ವಾಹನದ ಮಾಲೀಕನನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯ ಬಾಕಿ ಇದ್ದು, ತನಿಖೆ ಮುಂದುವರಿದಿದೆ.
ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಎಫ್.ಎಚ್. ಚಲವಾದಿ ಹಾಗೂ ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ. ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಮಂಜುನಾಥ ಮಳ್ಳಿಗೇರಿ, ಉಪ ನಿರೀಕ್ಷಕ ಸುನೀಲ ಎಸ್. ಪಾಟೀಲ, ನಿರೀಕ್ಷಕ ಬಾಳಗೌಡ ಪಾಟೀಲ, ಉಪ ನಿರೀಕ್ಷಕ ಅಗಸರ ಹಾಗೂ ಸಿಬ್ಬಂದಿ ಮತ್ತು ಗೃಹರಕ್ಷಕ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ಅಬಕಾರಿ ನಿರೀಕ್ಷಕ ಮಂಜುನಾಥ ಮಳ್ಳಿಗೇರಿ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.



