ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸೌಂದರ್ಯ ಲೋಕದ ಅತ್ಯಂತ ಪ್ರತಿಷ್ಠಿತ ’75ನೇ ಮಿಸ್ ಯೂನಿವರ್ಸ್ 2026′ ಕಿರೀಟವನ್ನು ಆತಿಥೇಯ ಪೋರ್ಟೊ ರಿಕೊ ದೇಶದ 27 ವರ್ಷದ ಸುಂದರಿ ಜೆನ್ನಿಫರ್ ಬ್ಯಾರೆಟೊ ಮುಡಿಗೇರಿಸಿಕೊಂಡಿದ್ದಾರೆ. ಇಂದು ನಡೆದ ಅಂತಿಮ ಸುತ್ತಿನಲ್ಲಿ, ಕಳೆದ ಬಾರಿಯ ವಿಶ್ವ ಸುಂದರಿ ಮೆಕ್ಸಿಕೊದ ಫಾತಿಮಾ ಬಾಷ್ ಅವರು ಜೆನ್ನಿಫರ್ ಅವರಿಗೆ ಕಿರೀಟ ತೊಡಿಸಿ ಸಂಭ್ರಮಿಸಿದರು. ಡೊಮಿನಿಕನ್ ರಿಪಬ್ಲಿಕ್ನ ಮೆಲಿಸ್ಸಾ ನುನೆಜ್ ಮೊದಲ ರನ್ನರ್-ಅಪ್ ಆದರೆ, ವೆನೆಜುವೆಲಾದ ಕ್ಲಾರಾ ವೇಗಾಸ್ ಗೋಟ್ಜ್ ಎರಡನೇ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಐತಿಹಾಸಿಕ ಗೆಲುವಿನೊಂದಿಗೆ ಪೋರ್ಟೊ ರಿಕೊ ಆರನೇ ಬಾರಿಗೆ ವಿಶ್ವ ಸುಂದರಿ ಕಿರೀಟವನ್ನು ತನ್ನದಾಗಿಸಿಕೊಂಡಂತಾಗಿದೆ.
ಅಂತಿಮ ಐದು ಸ್ಪರ್ಧಿಗಳ ಸುತ್ತಿನಲ್ಲಿ ಫಿಲಿಪೈನ್ಸ್, ನ್ಯೂಜಿಲೆಂಡ್, ವೆನೆಜುವೆಲಾ, ಡೊಮಿನಿಕನ್ ರಿಪಬ್ಲಿಕ್ ಮತ್ತು ಪೋರ್ಟೊ ರಿಕೊ ಸುಂದರಿಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎಲ್ಲರಿಗೂ “ಇಂದಿನ ಜಗತ್ತಿಗೆ ತನ್ನ ನಾಯಕರಿಂದ ಅತ್ಯಂತ ತುರ್ತಾಗಿ ಏನು ಬೇಕಾಗಿದೆ?” ಎಂಬ ಒಂದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ ಜೆನ್ನಿಫರ್, “ಇಂದಿನ ಜಗತ್ತಿಗೆ ವೃತ್ತಿಪರವಾಗಿ ಸಹಾನುಭೂತಿ ಹೊಂದಿರುವ ನಾಯಕರ ಅಗತ್ಯವಿದೆ. ನಾವು ಇತರರನ್ನು ಸುಲಭವಾಗಿ ತೀರ್ಪು ಮಾಡುವ ಮತ್ತು ಪ್ರಶ್ನಿಸುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಆದರೆ, ಒಬ್ಬ ನಿಜವಾದ ನಾಯಕ ತನ್ನ ಮೌಲ್ಯಗಳಿಗೆ ಬದ್ಧನಾಗಿ ನಿಲ್ಲಬೇಕು, ಇತರರಿಗೆ ಮಾದರಿಯಾಗಬೇಕು ಮತ್ತು ಸಾಧನೆಯ ಮಟ್ಟವನ್ನು ಎತ್ತರಿಸಬೇಕು” ಎಂದು ಹೇಳುವ ಮೂಲಕ ತೀರ್ಪುಗಾರರ ಮನಗೆದ್ದರು.
ಜೆನ್ನಿಫರ್ ಬ್ಯಾರೆಟೊ ಕೇವಲ ಸೌಂದರ್ಯ ಸ್ಪರ್ಧೆಗೆ ಸೀಮಿತವಾದವರಲ್ಲ. ವಿವಾಹಿತೆಯಾಗಿರುವ ಇವರು 7 ವರ್ಷದ ಮುದ್ದಾದ ಹೆಣ್ಣು ಮಗುವಿನ ತಾಯಿಯೂ ಹೌದು. ತಾಯ್ತನ, ವೃತ್ತಿಜೀವನ ಮತ್ತು ಸ್ಪರ್ಧೆ ಮೂರನ್ನೂ ಯಶಸ್ವಿಯಾಗಿ ನಿಭಾಯಿಸಿ ಕಿರೀಟ ಗೆದ್ದ ಅಪರೂಪದ ಸಾಧಕಿ ಇವರಾಗಿದ್ದಾರೆ. ಮನೋವಿಜ್ಞಾನ ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕ್ ವಿಷಯಗಳಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಇವರು, ಪ್ರಸ್ತುತ ಅಮೆರಿಕ ಸೇನೆಯ ರಕ್ಷಣಾ ಇಲಾಖೆಯಲ್ಲಿ ತಡೆಗಟ್ಟುವಿಕೆ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತ ಭಾರತದ ಭರವಸೆಯಾಗಿದ್ದ ಕೇರಳ ಮೂಲದ ಕಾಜಿಯಾ ಲಿಜ್ ಮೆಜೊ ಅವರು ಟಾಪ್ 12ರ ಸುತ್ತಿಗೆ ಪ್ರವೇಶಿಸಲು ವಿಫಲರಾಗಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಕಳೆದ ಆಗಸ್ಟ್ನಲ್ಲಿ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ ಗೆದ್ದು, ಈ ಗೌರವಕ್ಕೆ ಪಾತ್ರರಾದ ಕೇರಳದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾಜಿಯಾ, ವಿಶ್ವ ವೇದಿಕೆಯಲ್ಲಿ ಟಾಪ್ 30ರ ಹಂತದವರೆಗೆ ಮಾತ್ರ ತಲುಪಲು ಶಕ್ತರಾದರು.



