ಹೊಸದಿಗಂತ ಡಿಜಿಟಲ್ ಡೆಸ್ಕ್:
ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯುಎಇ ವಿರುದ್ಧ 15 ವರ್ಷದ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ದ್ವಿಶತಕದ ದಾಖಲೆ ಬರೆದಿದ್ದಾರೆ. 28 ಭರ್ಜರಿ ಸಿಕ್ಸರ್‌ಗಳನ್ನೊಳಗೊಂಡ ಈ ಸ್ಫೋಟಕ ಇನ್ನಿಂಗ್ಸ್‌ನ ಹಿಂದೆ ತಮ್ಮ ನೆಚ್ಚಿನ ಆಟಗಾರ ಯುವರಾಜ್ ಸಿಂಗ್ ಅವರ ಅರ್ಧ ಗಂಟೆಯ ದೂರವಾಣಿ ಕರೆಯ ಮಾರ್ಗದರ್ಶನವಿದೆ ಎಂದು ವೈಭವ್ ಹೇಳಿದ್ದಾರೆ.
ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ನೇಪಾಳ ವಿರುದ್ಧ 26 ರನ್ ಮತ್ತು ಪಾಕಿಸ್ತಾನ ಎ ವಿರುದ್ಧ 11 ರನ್ ಗಳಿಸಿದ್ದ ವೈಭವ್, ಅದಕ್ಕೂ ಮೊದಲು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಪರ 18 ರನ್ ಮಾತ್ರ ಗಳಿಸಿದ್ದರು. ಸತತ ಕಡಿಮೆ ಮೊತ್ತದಿಂದ ಮನಸ್ಸು ಚಂಚಲವಾಗಿತ್ತು ಮತ್ತು ಆತಂಕ ಕಾಡುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ತಾವು ಕೇವಲ ನಾಲ್ವರೊಂದಿಗೆ ಮಾತ್ರ ಮಾತನಾಡಿದ್ದಾಗಿ ಹೇಳಿದ್ದಾರೆ. ತಂದೆ, ಬಾಲ್ಯದ ಕೋಚ್, ಅಂಡರ್-19 ಗೆಳೆಯ ಪ್ರಥಮ್ ಮತ್ತು ತಮ್ಮ ಆದರ್ಶ ಯುವರಾಜ್ ಸಿಂಗ್.
ಸಂದರ್ಶನದಲ್ಲಿ ಮಾತನಾಡಿದ ವೈಭವ್, “ನಾನು ತುಂಬಾ ಆತಂಕದಲ್ಲಿದ್ದೆ. ಯುವರಾಜ್ ಸರ್ ಜೊತೆ ಮುಕ್ತವಾಗಿ ನನ್ನ ಸಮಸ್ಯೆಗಳನ್ನು ಹೇಳಿಕೊಂಡೆ. ಅವರು ಅರ್ಧ ಗಂಟೆ ತಾಳ್ಮೆಯಿಂದ ಬ್ಯಾಟಿಂಗ್ ಬಗ್ಗೆ ವಿವರಿಸಿದರು. 20 ಎಸೆತಗಳನ್ನು ಎದುರಿಸಿದರೆ ಸ್ಕೋರ್ ಬದಲಾಗುತ್ತದೆ ಎಂದು ಹೇಳಿದರು” ಎಂದು ವೈಭವ್ ನೆನಪಿಸಿಕೊಂಡಿದ್ದಾರೆ. ಆದರ್ಶ ವ್ಯಕ್ತಿ ಹೇಳುವ ಪ್ರತಿಯೊಂದು ಮಾತನ್ನೂ ಗಮನವಿಟ್ಟು ಕೇಳಿಸಿಕೊಂಡೆ, ನಂತರ ತಮ್ಮ ಬ್ಯಾಟಿಂಗ್ ವಿಡಿಯೋ ನೋಡಿ ತಪ್ಪುಗಳನ್ನು ತಿದ್ದಿಕೊಂಡು ಅದೇ ತಂತ್ರಗಳನ್ನು ಕಣದಲ್ಲಿ ಅಳವಡಿಸಿದೆ ಎಂದಿದ್ದಾರೆ.
ಹಿಂದಿನ ಪಂದ್ಯಗಳಂತೆ ದೀರ್ಘ ಇನ್ನಿಂಗ್ಸ್ ಕಟ್ಟುವ ಉದ್ದೇಶದಿಂದಲೇ ಕ್ರೀಸ್‌ಗೆ ಇಳಿದರೂ, ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿಲ್ಲ ಎಂಬುದನ್ನು ಆರಂಭದ ಕೆಲವು ಎಸೆತಗಳಲ್ಲೇ ವೈಭವ್ ಅರಿತುಕೊಂಡರು. ಚೆಂಡು ನೇರವಾಗಿ ಬ್ಯಾಟ್‌ಗೆ ಬರುತ್ತಿದ್ದರಿಂದ ತಮ್ಮ ಶಕ್ತಿಗೆ ತಕ್ಕಂತೆ ಆಕ್ರಮಣಕಾರಿ ಆಟಕ್ಕೆ ಮುಂದಾದರು. 28 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳ ನೆರವಿನಿಂದ ಅವರು ಬಾರಿಸಿದ 204 ರನ್‌ಗಳ ಇನ್ನಿಂಗ್ಸ್, ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.



