November 25, 2026
Wednesday, November 25, 2026
spot_img

ಬಂದರು ವಿಸ್ತರಣೆ, ಹೊಸ ವಿಮಾನ ನಿಲ್ದಾಣ ಸೇರಿ 5 ಪ್ರಮುಖ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ಬುಧವಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ತಮಿಳುನಾಡಿನ ಕಾಮರಾಜರ್ ಬಂದರಿನಲ್ಲಿ 4,288 ಕೋಟಿ ವೆಚ್ಚದಲ್ಲಿ ಎರಡನೇ ಕಂಟೇನರ್ ಟರ್ಮಿನಲ್ ನಿರ್ಮಾಣ ಹಾಗೂ ಅಸ್ಸಾಂನ ಸಿಲ್ಚಾರ್‌ನಲ್ಲಿ 2,014 ಕೋಟಿ ವೆಚ್ಚದಲ್ಲಿ ಹೊಸ ‘ಗ್ರೀನ್‌ಫೀಲ್ಡ್’ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಸಂಪುಟ ಹಸಿರು ನಿಶಾನೆ ತೋರಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಕಾಮರಾಜರ್ ಬಂದರು ಯೋಜನೆ

ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಎರಡು ಹಂತಗಳಲ್ಲಿ ಈ ಟರ್ಮಿನಲ್ ನಿರ್ಮಾಣವಾಗಲಿದ್ದು, ಇದಕ್ಕೆ 4,288.26 ಕೋಟಿ ವೆಚ್ಚವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ; ಆಯ್ಕೆಯಾದ ಖಾಸಗಿ ಸಂಸ್ಥೆಯೇ ಬಂಡವಾಳ ಹೂಡಲಿದೆ.

900 ಮೀಟರ್ ಉದ್ದದ ಈ ಟರ್ಮಿನಲ್ ವಾರ್ಷಿಕ 20 ಲಕ್ಷ ಕಂಟೇನರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಬೃಹತ್ ಅಂತಾರಾಷ್ಟ್ರೀಯ ಹಡಗುಗಳು ನೇರವಾಗಿ ಬಂದು ಹೋಗಲು ನೆರವಾಗಲಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೈಗಾರಿಕೆಗಳ ಆಮದು-ರಫ್ತು ವಹಿವಾಟಿಗೆ ಅನುಕೂಲವಾಗಲಿದೆ. ಈ ಯೋಜನೆಯಿಂದ ನಿರ್ಮಾಣ ಹಂತದಲ್ಲಿ ಸುಮಾರು 750 ಹಾಗೂ ಕಾರ್ಯಾಚರಣೆ ಹಂತದಲ್ಲಿ 800 ಜನರಿಗೆ ಉದ್ಯೋಗ ದೊರೆಯಲಿದೆ.

ಅಸ್ಸಾಂನ ಸಿಲ್ಚಾರ್‌ನಲ್ಲಿ ಹೊಸ ಏರ್‌ಪೋರ್ಟ್

ಅಸ್ಸಾಂನ ಕಚಾರ್ ಜಿಲ್ಲೆಯ ಡೊಲೂ ಎಂಬಲ್ಲಿ 2,014 ಕೋಟಿ ವೆಚ್ಚದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. 12,351 ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್ ಕಟ್ಟಡವು ಪೀಕ್ ಅವರ್‌ನಲ್ಲಿ 800 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಏಕಕಾಲಕ್ಕೆ 6 ಎ-320 ವಿಮಾನಗಳನ್ನು ನಿಲ್ಲಿಸುವ ವ್ಯವಸ್ಥೆ ಇಲ್ಲಿರಲಿದ್ದು, ಈಶಾನ್ಯ ಭಾರತದ ಪ್ರವಾಸೋದ್ಯಮ ಮತ್ತು ವ್ಯಾಪಾರ ವೃದ್ಧಿಗೆ ಇದು ಹೊಸ ದ್ವಾರವಾಗಲಿದೆ.

ಇದನ್ನೂ ಓದಿ:

ಇತರ ಪ್ರಮುಖ ನಿರ್ಧಾರಗಳು

ಇದರೊಂದಿಗೆ, ದೇಶೀಯ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಗೆ ಉತ್ತೇಜನ ನೀಡಲು 11,000 ಕೋಟಿ ಮೊತ್ತದ ಯೋಜನೆ, ಅಂಚೆ ಇಲಾಖೆಯ ಕಾರ್ಯಾಚರಣೆ ಯೋಜನೆಗೆ 1,141 ಕೋಟಿ ಹಾಗೂ ಎಸ್ಟೇಟ್ ನಿರ್ವಹಣಾ ಯೋಜನೆಗೆ 1,491 ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

Must Read

Skip to toolbar