November 25, 2026
Wednesday, November 25, 2026
spot_img

ದೆಹಲಿಯಲ್ಲಿ ಭಾರತ-ಇರಾನ್ ಅಧಿಕಾರಿಗಳ ಮಹತ್ವದ ಸಭೆ: ಹಿಂದೂ ಮಹಾಸಾಗರ ವಲಯದ ಅಭಿವೃದ್ಧಿಗೆ ಒತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇರಾನ್‌ನ ಉನ್ನತ ಮಟ್ಟದ ನಿಯೋಗವು ಬುಧವಾರ ದೆಹಲಿಯಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕಾರಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದೆ.

ಇರಾನ್‌ನ ಬಹುಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ವಿಭಾಗದ ಮಹಾನಿರ್ದೇಶಕ ಅಲಿರೆಜಾ ಟೂಟೊಂಚಿಯನ್ ನೇತೃತ್ವದ ನಿಯೋಗವು, ಭಾರತದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಥೆಲ್ಮಾ ಜಾನ್ ಡೇವಿಡ್ ಅವರೊಂದಿಗೆ ಸಮಾಲೋಚನೆ ನಡೆಸಿತು. ‘ಇಂಡಿಯನ್ ಓಷನ್ ರಿಮ್ ಅಸೋಸಿಯೇಷನ್’ ಚೌಕಟ್ಟಿನ ಅಡಿಯಲ್ಲಿ ಪ್ರಾದೇಶಿಕ ಸಹಕಾರವನ್ನು ವಿಸ್ತರಿಸುವ ಕುರಿತು ಉಭಯ ದೇಶಗಳ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿ ತಿಳಿಸಿದೆ.

ಮಹತ್ವದ ಸಭೆಗೆ ಮುನ್ನ ನಡೆದ ಭೇಟಿ


ಶುಕ್ರವಾರ (ನ. 27) ದೆಹಲಿಯಲ್ಲಿ ನಡೆಯಲಿರುವ 25ನೇ IORA ಸಚಿವರ ಮಂಡಳಿ ಸಭೆಗೆ ಪೂರ್ವಭಾವಿಯಾಗಿ ಈ ಭೇಟಿ ನಡೆದಿದೆ. ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಪಾಲ್ಗೊಳ್ಳಲಿರುವ ಈ ಶೃಂಗಸಭೆಯಲ್ಲಿ ಹಿಂದೂ ಮಹಾಸಾಗರ ವಲಯದ ಕಾರ್ಯತಂತ್ರದ ಆದ್ಯತೆಗಳು ಮತ್ತು ಅಭಿವೃದ್ಧಿಯ ಕುರಿತು ಚರ್ಚಿಸಲಾಗುವುದು. ಇದಕ್ಕೆ ಪೂರಕವಾಗಿ ಬುಧವಾರದಿಂದ ಎರಡು ದಿನಗಳ ಕಾಲ ಹಿರಿಯ ಅಧಿಕಾರಿಗಳ ಸಮಿತಿ ಸಭೆಗೂ ಭಾರತ ಆತಿಥ್ಯ ವಹಿಸಿದೆ. 2025ರ ನವೆಂಬರ್‌ನಲ್ಲಿ ಶ್ರೀಲಂಕಾದಿಂದ IORA ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತ, 2027ರವರೆಗೆ ಈ ಜವಾಬ್ದಾರಿಯನ್ನು ನಿಭಾಯಿಸಲಿದೆ.

ಇದನ್ನೂ ಓದಿ:

ಸಾಗರ ಭದ್ರತೆ ಕುರಿತು ಐರೋಪ್ಯ ಒಕ್ಕೂಟ-IORA ದುಂಡುಮೇಜಿನ ಸಭೆ

ಇನ್ನೊಂದೆಡೆ, ಮಂಗಳವಾರ ದೆಹಲಿಯಲ್ಲಿ ಐರೋಪ್ಯ ಒಕ್ಕೂಟ (EU) ಮತ್ತು IORA ನಡುವೆ ಸಾಗರ ಭದ್ರತೆ ಕುರಿತ ಮೊದಲ ಉನ್ನತ ಮಟ್ಟದ ದುಂಡುಮೇಜಿನ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಭಾರತಕ್ಕೆ ಐರೋಪ್ಯ ಒಕ್ಕೂಟದ ರಾಯಭಾರಿ ಜೀನ್-ಎರಿಕ್ ಪ್ಯಾಕೆಟ್, “ಹಿಂದೂ ಮಹಾಸಾಗರವು ಜಾಗತಿಕ ವ್ಯಾಪಾರಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಸಮುದ್ರದಲ್ಲಿನ ಕಳ್ಳತನ, ಕಳ್ಳಸಾಗಣೆ ತಡೆಗಟ್ಟಲು ಮತ್ತು ಜಾಗತಿಕ ಪೂರೈಕೆ ಸರಪಳಿಯನ್ನು ಸುರಕ್ಷಿತವಾಗಿಡಲು ಪ್ರಾದೇಶಿಕ ಸಹಕಾರ ಮತ್ತು ಮಾಹಿತಿ ವಿನಿಮಯ ಅತ್ಯಗತ್ಯ” ಎಂದು ಪ್ರತಿಪಾದಿಸಿದರು. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

Must Read

Skip to toolbar