ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್ ಹೇಳಿರುವ, ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿರುವ ಬಹುನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮಾ ‘ಇಂಜಿ ವೆಲ್ಲಂ’ ಚಿತ್ರದ ಮೊದಲ ಹಾಡು ‘ಆಚಿ ಆಚಿ’ ಬುಧವಾರ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾಮಾನ್ಯವಾಗಿ ಉದ್ದನೆಯ ಗುಂಗುರು ಕೂದಲಿನಲ್ಲಿ ಕಾಣಿಸಿಕೊಳ್ಳುವ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ಈ ಹಾಡಿನಲ್ಲಿ ಬಾಯ್-ಕಟ್ ಕೂದಲು ಹಾಗೂ ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ತಾಯ್ತನದ ಸಂಭ್ರಮವನ್ನು ಸಾರುವ ಈ ಹಾಡಿನಲ್ಲಿ ಸಾಯಿ ಪಲ್ಲವಿ ಅವರ ಲವಲವಿಕೆಯ ನೃತ್ಯ ಮತ್ತು ಹೊಸ ಗೆಟಪ್ ನೆಟ್ಟಿಗರ ಮನಗೆದ್ದಿದೆ.
ಎ.ಆರ್. ರೆಹಮಾನ್ ಸಂಗೀತದ ಮೋಡಿ
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಇಳಂಗೋ ಕೃಷ್ಣನ್ ಸಾಹಿತ್ಯ ಬರೆದಿದ್ದಾರೆ. ವೈಶಾಲಿ ಸಮಂತ್ ಮತ್ತು ಶರಣ್ಯ ಶ್ರೀನಿವಾಸ್ ಹಾಡಿಗೆ ಧ್ವನಿಯಾಗಿದ್ದಾರೆ. ತಮಿಳು ಮತ್ತು ಮಲಯಾಳಂ ಸಾಹಿತ್ಯದ ಸೊಗಸಾದ ಫ್ಯೂಷನ್ ಹೊಂದಿರುವ ಈ ಹಾಡು, ಕೋಲ್ಕತ್ತಾ ಹಿನ್ನೆಲೆಯಲ್ಲಿ ಸಾಗುವ ಯುವ ಜೋಡಿಯ ಪ್ರೇಮ ಹಾಗೂ ಪೋಷಕತ್ವದ ಪಯಣವನ್ನು ಸುಂದರವಾಗಿ ಕಟ್ಟಿಕೊಟ್ಟಿದೆ.
ಸಿನಿಮಾ ಬಿಡುಗಡೆ ಯಾವಾಗ?
‘ಮದ್ರಾಸ್ ಟಾಕೀಸ್’ ಮತ್ತು ‘ಲೈಕಾ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ಮಿಸಿರುವ ‘ಇಂಜಿ ವೆಲ್ಲಂ’ ಚಿತ್ರದ ಬಹುತೇಕ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆದಿದೆ. ಮಣಿರತ್ನಂ ಮತ್ತು ಎ.ಆರ್. ರೆಹಮಾನ್ ಜೋಡಿಯ ಮತ್ತೊಂದು ಮ್ಯಾಜಿಕ್ ನಿರೀಕ್ಷೆಯಲ್ಲಿರುವ ಈ ಸಿನಿಮಾ 2027ರ ಜನವರಿ 29ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.



